ADVERTISEMENT

ಲಾಠಿ ಪ್ರಹಾರ: ಶಾಸಕ ಸೇರಿ ಹಲವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:06 IST
Last Updated 6 ಸೆಪ್ಟೆಂಬರ್ 2017, 7:06 IST
ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು
ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು   

ತುಮಕೂರು: ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ಯೋಜನೆಯ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸುವಂತೆ ಒತ್ತಾಯಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಶಾಸಕ ಬಿ.ಸುರೇಶ್‌ಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಹೇಮಾವತಿಯಿಂದ ಜಿಲ್ಲೆಗೆ ನೀರು ಬಿಡದೇ ಕೆಆರ್‌ಎಸ್‌ಗೆ ನೀರು ಹರಿಸಿಕೊಂಡು ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಲಾಯಿತು. ಈ ಸಂದರ್ಭ ಪ್ರತಿಭಟನಾಕಾರರು ಇದ್ದಕ್ಕಿದ್ದಂತೆ ಜಿಲ್ಲಾಧಿಕಾರಿ ಕಚೇರಿಯತ್ತ ಕಲ್ಲು ತೂರಿದರು.

ನಿಯಮದಂತೆ ನಾಲೆಯ ಕೊನೆಹಂತದ ಕೆರೆಗಳಿಗೆ ನೀರು ಹರಿಸಬೇಕು. ಆದರೆ ಈ ರೀತಿ ಮಾಡದೆ ಜಿಲ್ಲಾಧಿಕಾರಿ ಅವರು  ಗ್ರಾಮಾಂತರ ಕ್ಷೇತ್ರ ಮತ್ತು ಕುಣಿಗಲ್‌ ತಾಲ್ಲೂಕಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಭಾಗಕ್ಕೆ ಹದಿನೈದು ದಿನ ನೀರು ಬಿಡುವುದಾಗಿ ಹೇಳಿದ್ದಾರೆ. ಆದರೂ ಈವರೆಗೂ ಗ್ರಾಮಾಂತರ ಕ್ಷೇತ್ರದ ಕೆರೆಗೆಗಳಿಗೆ ನೀರು ಪಂಪು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್‌ ಅವರು ಸ್ಥಳಕ್ಕೆ ಬರಲಿಲ್ಲ ಎಂದು ಆಕ್ರೋಶಗೊಂಡರು. ಜಿಲ್ಲಾಡಳಿತದ ವಿರುದ್ಧ ಜೋರು ಧ್ವನಿಯಲ್ಲಿ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಕಲ್ಲುಗಳನ್ನು ಆಯ್ದುಕೊಂಡು ಜಿಲ್ಲಾಧಿಕಾರಿ ಕಚೇರಿಯತ್ತ  ಎಸೆದರು. ಪ್ರತಿಭಟನಾಕಾರರನ್ನು ಬಂಧಿಸಲು ಪೊಲೀಸರು ತಂದಿದ್ದ ಕೆಎಸ್‌ಆರ್‌ಟಿಸಿ ಬಸ್‌ನತ್ತಲೂ ಕಲ್ಲು ತೂರಿದರು. ಇದರಿಂದ ಬಸ್‌ನ ಗಾಜುಗಳು ಪುಡಿಪುಡಿಯಾದವು.

ಪ್ರತಿಭಟನಾಕಾರರನ್ನು ತಹಬದಿಗೆ ತರಲು ಶಾಸಕ ಬಿ.ಸುರೇಶ್‌ಗೌಡ ಅವರನ್ನು ಪೊಲೀಸರು ಬಂಧಿಸಲು ಮುಂದಾದಾಗ ಪರಸ್ಪರ ವಾಗ್ವಾದ, ಘೋಷಣೆಗಳು ಕೇಳಿಬಂದವು. ಜರನನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರು ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸಿದರು. ಹಿರಿಯ ನಾಗರಿಕರು ಕೆಳಗ್ಗೆ ಬಿದ್ದರೂ ಲಾಠಿ ರುಚಿ ತೋರಿಸಿದರು.

ಹೇಮಾವತಿ ನೀರು ಹರಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಬೇಕು. ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು. ಆ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಇದಕ್ಕು ಮುನ್ನ ಸುರೇಶ್‌ಗೌಡ ತಮ್ಮ ಭಾಷಣದಲ್ಲಿ ಒತ್ತಾಯಿಸಿದರು.

5– 6 ವರ್ಷದಿಂದ ಸತತವಾಗಿ ಹೋರಾಟ ಮಾಡುವ ಮೂಲಕ ಜಿಲ್ಲೆಗೆ ನೀರು ತರಲಾಗಿದೆ. ಪ್ರತಿ ವರ್ಷ ಮನವಿ ಸಲ್ಲಿಸಿ, ಲಾಠಿ ಏಟು ತಿಂದು ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಸಚಿವರ ಸಭೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ ಜಿಲ್ಲಾಡಳಿತ ನೀರು ಬಿಡದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

‘ಈ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ನೀರು ಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇನೆ. ಜೈಲಿಗೆ ಹೋದರೂ ಪರವಾಗಿಲ್ಲ. ನಾವು ಕೇಳುತ್ತಿರುವುದು ನಮ್ಮ ಹಕ್ಕು. ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ’ ಎಂದರು.

‘ಹೋರಾಟದ ಕಿಚ್ಚು ಹೆಚ್ಚಿದಾಗ ಮಾತ್ರ ನಮ್ಮ ಹಕ್ಕು ನಮಗೆ ಸಿಗುತ್ತದೆ. ಜಿಲ್ಲೆಗೆ ಹಾಗೂ ರೈತರಿಗೆ ನೀರು ಬೇಕು. ಅದಕ್ಕಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕಾಂಗ್ರೆಸ್‌ ಸರ್ಕಾರ, ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಇವರಿಗೆ ಪಾಠ ಕಲಿಸಲು ಇದೀಗ ಕಾಲ ಕೂಡಿ ಬಂದಿದೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಿಗೆ ನೀರು ಹರಿಸುತ್ತಿಲ್ಲ. ಆ ಮೂಲಕ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕೆಲವೇ ದಿನಗಳಲ್ಲಿ ನೀರು ಹರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮುಖಂಡ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ರೈತರ ಬದುಕು ಹಸಿರಾಗಲು ನೀರು ಮುಖ್ಯ. ಆದರೆ ಜಿಲ್ಲೆಯ ರೈತರಿಗೆ ನೀರು ಕೊಡದೆ ಜಿಲ್ಲಾಡಳಿತ ಅನ್ಯಾಯ ಎಸಗುತ್ತಿದ್ದು, ರೈತರನ್ನು ಒಕ್ಕಲೆಬ್ಬಿಸುತ್ತಿದೆ’ ಎಂದರು.

‘ರಾಜ್ಯ ಸರ್ಕಾರ ದಲಿತರ ಹಾಗೂ ರೈತರ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ. ಜತೆಗೆ ಜಿಲ್ಲಾಡಳಿತ ವಿಫಲವಾಗಿದೆ. ತುಮಕೂರು ಗ್ರಾಮಾಂತರ ಮತ್ತು ಕುಣಿಗಲ್‌ಗೆ ಹರಿಸುವ ನೀರನ್ನು ಗುಬ್ಬಿ ಹಾಗೂ ತುರುವೇಕೆರೆಗೆ ಹರಿಸುವ ಮೂಲಕ ನಮ್ಮ ನೀರನ್ನು ಕದಿಯಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ನರಸಿಂಹಮೂರ್ತಿ ಮಾತನಾಡಿ, ‘ನೀರು ನಮ್ಮ ಹಕ್ಕು. ನಾವು ರೈತರ ವ್ಯವಸಾಯಕ್ಕೆ ನೀರು ಕೇಳುತ್ತಿಲ್ಲ. ಬದಲಾಗಿ ಕುಡಿಯಲು ನೀರು ಹರಿಸಿ’ ಎಂದು ಮನವಿ ಮಾಡಿದರು. ಮುಖಂಡರಾದ ವೈ.ಎಚ್.ಹುಚ್ಚಯ್ಯ, ಕುಮಾರಣ್ಣ, ಗಂಗಾಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.