ADVERTISEMENT

ಸಾಲಮನ್ನಾ ಮಾಡದಿದ್ದರೆ ಓಡಾಡಲು ಬಿಡಲ್ಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 9:18 IST
Last Updated 28 ಫೆಬ್ರುವರಿ 2017, 9:18 IST
ಸಾಲಮನ್ನಾ ಮಾಡದಿದ್ದರೆ ಓಡಾಡಲು ಬಿಡಲ್ಲ
ಸಾಲಮನ್ನಾ ಮಾಡದಿದ್ದರೆ ಓಡಾಡಲು ಬಿಡಲ್ಲ   
ತುಮಕೂರು: ‘ಬಜೆಟ್‌ನಲ್ಲಿ ರೈತರ ಸಹಕಾರಿ ಸಾಲ ಮನ್ನಾ ಮಾಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜನರು ಓಡಾಡಲು ಬಿಡಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
 
ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಾಲ್ಲೂಕಿನ ಬೆಳ್ಳಾವಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
 
ಬರ ನಿರ್ವಹಣೆಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಕೇಂದ್ರದಿಂದ ಸಾಕಷ್ಟು ಅನುದಾನ ಬಿಡುಗಡೆಯಾದರೂ ಅದನ್ನು ಬಳಸದೇ ವೃಥಾ ದೂರಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ರಾಜ್ಯಕ್ಕೆ ಶನಿ ವಕ್ಕರಿಸಿಕೊಂಡಿದೆ ಎಂದರು.
 
ಕೇಂದ್ರ ಸರ್ಕಾರ ₹3 ದರದಲ್ಲಿ 1.65 ಮೆಟ್ರಿಕ್‌ ಟನ್‌ ಅಕ್ಕಿ ಪೂರೈಸಿದೆ. ಆದರೆ ಗುಣಮಟ್ಟದ ಅಕ್ಕಿಯನ್ನು ಮಾರಾಟ ಮಾಡಿ, ಪಡಿತರ ಕಾರ್ಡ್‌ದಾರರಿಗೆ ಕಳಪೆ ಅಕ್ಕಿ ವಿತರಿಸಲಾಗುತ್ತಿದೆ. ಲಕ್ಷಾಂತರ ಜನರ ಪಡಿತರ ಚೀಟಿ ಕಿತ್ತುಕೊಳ್ಳಲಾಗಿದೆ. ಇದ್ಯಾವುದನ್ನೂ ದೇವರು ಕ್ಷಮಿಸಲ್ಲ ಎಂದು ಕಿಡಿಕಾರಿದರು.
 
ಜಲಾಶಯಗಳಲ್ಲಿ ನೀರಿಲ್ಲ. ಜಾನುವಾರು ಹಾಗೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗೋಶಾಲೆ, ಮೇವು ಬ್ಯಾಂಕ್‌ ಸ್ಥಾಪನೆ ಹಾಗೂ ಜನರಿಗೆ ಟ್ಯಾಂಕರ್‌ ನೀರು ಪೂರೈಸುವಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದರು.
 
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್‌.ಬಸವರಾಜು, ಮಾಜಿ ಸಚಿವರಾದ ಸಿ.ಎಂ.ಉದಾಸಿ, ಬಸವರಾಜು ಬೊಮ್ಮಾಯಿ, ಮುರುಗೇಶ್‌ ನಿರಾಣಿ, ಲಕ್ಷ್ಮಣ್‌ ಸವದಿ, ವಿ.ಸೋಮಣ್ಣ, ಉಮೇಶ್‌ ಕತ್ತಿ, ಶಾಸಕ ಬಿ.ಸುರೇಶ್‌ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್‌, ಹೆಬ್ಬಾಕ ರವಿ ಇದ್ದರು.
 
**
ಪಾದಪೂಜೆ
ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸಿದ್ದಗಂಗಾ ಮಠಕ್ಕೆ ಬಂದು ಶ್ರೀಗಳಿಗೆ ಪಾದಪೂಜೆ ನೆರವೇರಿಸಿ, ಆಶೀರ್ವಾದ ಪಡೆದರು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಸೇರಿ ರಾಜ್ಯದ ನಾಯಕರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.