ADVERTISEMENT

‘ಆಡಂಬರ ಬಿಡಿ, ಸರಳವಾಗಿ ಮದುವೆಯಾಗಿ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:34 IST
Last Updated 27 ನವೆಂಬರ್ 2014, 10:34 IST

ಶಿರಾ:  ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಬಂದು ಉತ್ತ­ಮ ಆರ್ಥಿಕ ಸ್ಥಿತಿಯಲ್ಲಿರುವ ಯುವಕರು ತಮ್ಮ ಗ್ರಾಮಗಳಲ್ಲಿ ಉಚಿತ ಸಾಮೂಹಿಕ ವಿವಾ­ಹಗಳನ್ನು ಮಾಡುವ ಮೂಲಕ ಆಡಂಬರದ ಸಂಸ್ಕೃತಿಗೆ ತಿಲಾಂಜಲಿ ಹೇಳಬೇಕು ಎಂದು ಮಾಜಿ ಸಚಿವ ಬಿ.ಸತ್ಯನಾರಾಯಣ ತಿಳಿಸಿದರು.

ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕ್ಯಾದಿಗುಂಟೆ ಗ್ರಾಮದಲ್ಲಿ ಶಿವಾಲಯ ದೇವ­ಸ್ಥಾನ ಸಮಿತಿ ಬುಧವಾರ ಏರ್ಪಡಿಸಿದ್ದ ಸರಳ ಸಾಮೂಹಿಕ ವಿವಾಹ, ಗರ್ಭಿಣಿಯರಿಗೆ ಮಡಿಲು ತುಂಬುವ ಹಾಗೂ ಕಣ್ಣಿನ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜಗತ್ತು ಆಡಂಬರದ ಮದುವೆಗಳನ್ನೇ ಆದರ್ಶ ಎಂದು ಭಾವಿಸುತ್ತಿರುವಾಗ, ಮಳೆ ಬೆಳೆ ಇಲ್ಲದ ರೈತಾಪಿ ವರ್ಗ ತಮ್ಮ ಮಕ್ಕಳ ಮದುವೆ ಮಾಡುವುದು ಹೇಗೆ ಎಂದು ಕೊರಗುತ್ತಿದ್ದಾರೆ. ಅಂತ­ಹವರಿಗೆ ಉಚಿತ ಸಾಮೂಹಿಕ ವಿವಾಹ­ಗಳು ವರದಾನವಾಗಲಿವೆ ಎಂದರು.

ಪ್ರತಿಯೊಬ್ಬ ನಾಗರಿಕರು ತಮ್ಮ ಜೀವನದಲ್ಲಿ ಸರಳತೆ ಅಳವಡಿಸಿಕೊಳ್ಳಬೇಕು. ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಬೇಕು. ತಮ್ಮಲ್ಲಿ ಹೆಚ್ಚು ಸಂಪತ್ತು ಇದ್ದರೆ ಅದರ ಸ್ವಲ್ಪ ಭಾಗವನ್ನು ಸಮಾಜ ಕಾರ್ಯಗಳಿಗೆ ವಿನಿಯೋಗಿಸಿದರೆ ದೇವ­ರು ಅಂತಹವರನ್ನು ಮೆಚ್ಚುತ್ತಾನೆ ಎಂದು ಸಮಾ­ರಂಭದ ಸಾನ್ನಿಧ್ಯ ವಹಿಸಿದ್ದ ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್ ನವ ವಧು–ವರರಿಗೆ ಮಾಂಗಲ್ಯ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ವಿಶಾಲಾಕ್ಷಿ ಪ್ರಕಾಶ್‌ಗೌಡ, ನಗರಸಭೆ ಮಾಜಿ ಸದಸ್ಯ ಆರ್.ರಾಮು, ಶಿವಾಲಯ ಸೇವಾ ಸಮಿತಿ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಆರತಿ, ನಗರಸಭೆ ಅಧ್ಯಕ್ಷೆ ಜ್ಞಾನಪೂರ್ಣ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಗಂಗಾಧರಯ್ಯ,  ಉಪಾಧ್ಯಕ್ಷೆ ಪಿ.ಆರ್.ಮಂಜುಳ, ತಾಲ್ಲೂಕು ಆರೋಗ್ಯಾ­ಧಿಕಾರಿ ಡಾ.ತಿಮ್ಮರಾಜು, ಡಾ.ನಂದೀಶ್, ಬಾಂಬೇರಾಜಣ್ಣ, ದೊಡ್ಡೇಗೌಡ, ಎಲ್.ಕೆ.ಮಂಜುನಾಥ್, ಮಂದ್ಲಹಳ್ಳಿ ನಾಗ­ರಾಜು, ನಾಗರಾಜು, ರಂಗನಾಥ್, ನಾಗೇಶ್ ಮತ್ತಿತರರು ಇದ್ದರು.
ಲಯನ್ಸ್ ಕ್ಲಬ್, ಆಸರೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆವತಿಯಿಂದ ಉಚಿತವಾಗಿ ಕಣ್ಣಿನ ಚಿಕಿತ್ಸೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.