ADVERTISEMENT

ಅಡುಗೆ ಅನಿಲ ಬೆಲೆ ಏರಿಕೆಗೆ ಆಕ್ರೋಶ

ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಪ್ರತಿಭಟನೆ– ಬ್ಯಾಂಕಿಂಗ್‌ ವ್ಯವಹಾರಕ್ಕೆ ಶುಲ್ಕ: ಖಂಡನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 5:35 IST
Last Updated 3 ಮಾರ್ಚ್ 2017, 5:35 IST
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹ 85 ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಬ್ಯಾಂಕಿಂಗ್‌ ವ್ಯವಹಾರಕ್ಕೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿದರು.  ಪ್ರಜಾವಾಣಿ ಚಿತ್ರ
ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹ 85 ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಬ್ಯಾಂಕಿಂಗ್‌ ವ್ಯವಹಾರಕ್ಕೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ನಗರದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹85 ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ಬ್ಯಾಂಕಿಂಗ್‌ ವ್ಯವಹಾರಕ್ಕೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಸದಸ್ಯರು ನಗರದ ಸರ್ವೀಸ್‌ ಬಸ್ ನಿಲ್ದಾಣದ ಎದುರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಸಿಲಿಂಡರ್‌ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಜನ ಸಾಮಾನ್ಯರಿಗೆ ಹೊಡೆತ ನೀಡಿದೆ. ಬ್ಯಾಂಕಿ ನಲ್ಲಿರುವ ನಮ್ಮದೇ ಹಣ ತೆಗೆಯಲು ಸಹ ಶುಲ್ಕ ವಿಧಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ವೆರೋನಿಕ ಕರ್ನೇಲಿಯೊ ಮಾತನಾಡಿ, ಒಂದೇ ಬಾರಿ ಸಿಲಿಂಡರ್‌ ಬೆಲೆಯನ್ನು ₹85 ಏರಿಕೆ ಮಾಡಿರುವ ಕ್ರಮ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈ ದೇಶದ ಬಡ ಜನರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ ₹5 ಹೆಚ್ಚಿಸಿದ್ದನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿ ಬೀದಿ ಗಿಳಿದಿತ್ತು. ಆ ಕಾಳಜಿ ಈಗೇಕಿಲ್ಲ ಎಂದು  ಪ್ರಶ್ನಿಸಿದರು. ಬ್ಯಾಂಕಿಂಗ್ ವ್ಯವಹಾರ ಮಾಡುವ ಜನ ಸಾಮಾನ್ಯರಿಗೆ ಶುಲ್ಕ ವಿಧಿಸಿರುವುದು ಖಂಡನೀಯ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಉಪಾ ಧ್ಯಕ್ಷೆ ಜ್ಯೋತಿ ಹೆಬ್ಬಾರ್ ಅವರು ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ₹2, ₹5 ಏರಿಕೆಯಾದರೂ ಬಿಜೆಪಿ ಪ್ರತಿಭಟನೆ ನಡೆಸುತ್ತಿತ್ತು. ಆದರೆ, ಈಗ ಅವರೇ ಗರಿಷ್ಠ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ಹೊಡೆತ ನೀಡುತ್ತಿದ್ದಾರೆ.

ಆರು ತಿಂಗಳಿನಲ್ಲಿ ಸಿಲಿಂಡರ್ ಬೆಲೆ ₹200 ಏರಿಕೆಯಾಗಿದೆ. ಈ ಸರ್ಕಾರಕ್ಕೆ ಜನ ಸಾಮಾನ್ಯರ ಮೇಲೆ ಕಾಳಜಿ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಜೀವನಕ್ಕೆ ಎರವಾಗು ವಂತಹ ಯಾವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆಯೋ ಎಂಬ ಭಯದಲ್ಲಿ ಬದುಕುವಂತಹ ವಾತಾ ವರಣ ನಿರ್ಮಾಣವಾಗಿದೆ ಎಂದರು.

ನೋಟು ರದ್ದಾದ ನಂತರ ಎಷ್ಟು ಕಪ್ಪು ಹಣ ಬಂದಿದೆ ಎಂಬ ಲೆಕ್ಕವನ್ನು ಕೊಡಲು ಅಸಮರ್ಥವಾಗಿರುವ ಬಿಜೆಪಿಗೆ ಕಾಂಗ್ರೆಸ್‌ನ  60 ವರ್ಷದ ಆಡಳಿತದ ಲೆಕ್ಕ ಕೇಳಲು ನೈತಿಕತೆ ಇಲ್ಲ. ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಸರ್ವಾಧಿಕಾರಿ ಆಡಳಿತ ಸರಿಯಲ್ಲ. ಅಹಂಕಾರ ತಲೆಗೇರಿದಾಗಲೇ ಅಧಃಪತನ ಶುರುವಾಗಿದೆ.

ಕೇವಲ ವಿದೇಶಿ ಪ್ರವಾಸಕ್ಕಾಗಿಯೇ ಪ್ರಧಾನಿ ₹1150 ಕೋಟಿ ಖರ್ಚು ಮಾಡಿದ್ದಾರೆ. ರಾಕ್ಷಸರು ಮಾತ್ರ ರಾತ್ರಿ ವೇಳೆ ಕೆಲಸ– ಯುದ್ಧ ಮಾಡುತ್ತಿದ್ದರು ಎಂದು ನಾವು ಪುರಾಣದಲ್ಲಿ ಕೇಳಿದ್ದೇವೆ, ಪ್ರಧಾನಿ ನರೇಂದ್ರ ಮೋದಿ ಅವರೂ ಎಲ್ಲ ತೀರ್ಮಾನಗಳನ್ನು ರಾತ್ರಿಯೇ ಪ್ರಕಟಿಸು ತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಮುಖಂಡರಾದ ಹರೀಶ್ ಕಿಣಿ, ದಿನೇಶ್‌ ಪುತ್ರನ್‌, ರಮೇಶ್ ಕಾಂಚನ್ ಇದ್ದರು.

ADVERTISEMENT

*
ದೇಶ ಸೇವೆಗಾಗಿ ಎಲ್ಲವನ್ನೂ ಬಿಟ್ಟು ಬಂದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ, ಬಿಟ್ಟು ಬರಲು ಅವರ ಬಳಿ ಏನಿತ್ತು ?  ಅವರದ್ದೇನು ಶ್ರೀಮಂತ ಕುಟುಂಬವೇ?
-ಜ್ಯೋತಿ ಹೆಬ್ಬಾರ್‌, ಕಾಂಗ್ರೆಸ್ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.