ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ

ಎಂ.ನವೀನ್ ಕುಮಾರ್
Published 13 ಮೇ 2017, 7:36 IST
Last Updated 13 ಮೇ 2017, 7:36 IST

ಉಡುಪಿ: ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರವಾಗಿದ್ದ ಉಡುಪಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿಯೂ ಅಗ್ರ ಸ್ಥಾನ ಪಡೆಯುವ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

ಜಿಲ್ಲೆ ಶೇ 84.23ರಷ್ಟು ಫಲಿತಾಂಶ ದಾಖಲಿಸಿ ಮೊದಲ ಸ್ಥಾನಕ್ಕೇರಿದೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ  ಶೇ 5.49ರಷ್ಟು ಫಲಿತಾಂಶ ಇಳಿಕೆ ಯಾಗಿದೆ. ಕಳೆದ ವರ್ಷ ಎರಡನೇ ಸ್ಥಾನ ಪಡೆದರೂ ಸಹ ಶೇ 89.72ರಷ್ಟು ಫಲಿತಾಂಶ ಪಡೆದಿತ್ತು.

ಹಿಂದಿನ ವರ್ಷ ಬಹಳ ಕಡಿಮೆ ಅಂತರದಲ್ಲಿ ಮೊದಲ ಸ್ಥಾನ ಕೈತಪ್ಪಿದ್ದ ರಿಂದ ಈ ಬಾರಿ ಮೊದಲು ಸ್ಥಾನ ಪಡೆ ಯಲು ಹಲವು ಹೊಸ ವಿಧಾನಗಳನ್ನು ಅನುಸರಿಸಲಾಗಿತ್ತು. ಮುಖ್ಯವಾಗಿ ಶಾಲೆ ಆರಂಭ ಮತ್ತು ಶಾಲಾವಧಿ ಮುಗಿದ ನಂತರ ಕಡ್ಡಾಯ ಕಲಿಕೆ ಪದ್ಧತಿ ಜಾರಿ ಮಾಡಲಾಗಿತ್ತು. ಆಂದರೆ ಶಾಲೆ ಆರಂಭವಾಗುವ ಮೊದಲು 1 ಗಂಟೆ ಹಾಗೂ ಮುಗಿದ ನಂತರ 1 ಗಂಟೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂಬ ನಿಯಮವನ್ನು ಜಾರಿ ಮಾಡಲಾಗಿತ್ತು. ಶಾಲೆಯಿಂದ ಮನೆಗೆ ಹೋದ ನಂತರ ಮಕ್ಕಳು ಓದು ವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.

ADVERTISEMENT

ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೂ ಅಂತರ ಮಾತ್ರ ತುಂಬಾ ಕಡಿಮೆ ಇತ್ತು. ಉಡುಪಿ ಜಿಲ್ಲೆಯ 16 ಮಕ್ಕಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದರೆ ಮೊದಲ ಸ್ಥಾನವೇ ಲಭಿಸುತ್ತಿತ್ತು. ಆದ್ದರಿಂದ ಈ ಬಾರಿ ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣನಾಗಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು.

ಈ ವರ್ಷ ಯಾವುದೇ ವಿಷಯದ ಲ್ಲಿಯೂ ಎಡವಟ್ಟು ಆಗಬಾರದು ಎಂಬ ಉದ್ದೇಶದಿಂದ ಎರಡು ಬಾರಿ ಕೊರಗ ಮಕ್ಕಳಿಗೆ ಸನಿವಾಸ ಸಹಿತ ವಿಶೇಷ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಮೊದಲೆರಡು ಶಿಬಿರಗಳಿಗೆ ಹಾಜರಾ ಗದವರಿಗೆ ಇನ್ನೊಂದು ವಿಶೇಷ ಶಿಬಿರ ಸಹ ಆಯೋಜಿಸಲಾಗಿತ್ತು.

ಪಠ್ಯಕ್ರಮ ಬೋಧನೆ ಕಾಲಮಿತಿ ಯಲ್ಲಿ ಪೂರ್ಣಗೊಳ್ಳಬೇಕು ಎಂಬ ಕಾರ ಣದಿಂದ ಪ್ರತಿ ತಿಂಗಳು ಆ ಬಗ್ಗೆ ಪ್ರಗತಿ ಪರಿಶೀಲನೆ  ಮಾಡಲಾಗುತ್ತಿತ್ತು. ಪಾಠ ಗಳು ಉಳಿದಿದ್ದರೆ ಅದನ್ನು ಮುಂದಿನ ತಿಂಗಳ ಅವಧಿಯಲ್ಲಿಯೇ ಪೂರ್ಣಗೊಳಿ ಸುವಂತೆ ಸೂಚನೆ ನೀಡಲಾಗುತ್ತಿತ್ತು. ಪರೀಕ್ಷೆ ಹತ್ತಿರ ಬಂದರೂ ಇನ್ನೂ ಪಾಠ ಪೂರ್ಣವಾಗಿಲ್ಲ ಎಂಬ ದೂರುಗಳು ಬರದಂತೆ ನೋಡಿಕೊಳ್ಳಲಾಯಿತು.

‘ಶಾಲೆಯ ಮುಖ್ಯೋಪಾಧ್ಯಾಯರ ಸಭೆಯನ್ನು ಪ್ರತಿ ತಿಂಗಳು ನಡೆಸಿ ಪಠ್ಯ ಕ್ರಮ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಬಗ್ಗೆ ಮಾಹಿತಿ ಪಡೆಯತ್ತಿದ್ದೆ. ಪರೀಕ್ಷೆಯ ಅಂಕಗಳನ್ನು ಆಧರಿಸಿ ಕಲಿಕೆ ಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಹೆಚ್ಚುವರಿ ತರಬೇತಿ ನೀಡಲಾಯಿತು. ಅಲ್ಲದೆ ಶಿಕ್ಷಕ ವಿನಿಮಯ ಕಾರ್ಯಕ್ರ ಮವನ್ನೂ ಜಾರಿಗೊಳಿಸಲಾಯಿತು. ಒಂದು ಶಾಲೆಯ ಶಿಕ್ಷಕರನ್ನು ಇನ್ನೊಂದು ಶಾಲೆಗೆ ನಿಯೋಜಿಸಿ ಅವರ ಮೂಲಕ ಕಠಿಣ ಎನಿಸುವ ಪಾಠಗಳನ್ನು ಹೇಳಿಕೊ ಡಲಾಯಿತು. ಇದರಿಂದಾಗಿ ವಿದ್ಯಾರ್ಥಿ ಗಳು ಕ್ಲಿಷ್ಟಕರ ವಿಷಯಗಳನ್ನು ಮನನ ಮಾಡಿಕೊಳ್ಳಲು ಸಹಾಯವಾಯಿತು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪ ನಿರ್ದೇಶಕ ಎಚ್‌. ದಿವಾಕರ ಶೆಟ್ಟಿ.

ಒಟ್ಟಾರೆ ಫಲಿತಾಂಶ ಕಡಿಮೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಬಾರಿ ಗ್ರೇಸ್‌ ಮಾರ್ಕ್ಸ್‌ ತೆಗೆದು ಹಾಕಿರುವುದು ಇದಕ್ಕೆ ಮುಖ್ಯ ಕಾರಣ. ನಾವು ಪ್ರಮುಖ ಪ್ರಶ್ನೆಗಳನ್ನು ಪಟ್ಟಿ ಮಾಡಿ ಅವುಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ವಿದ್ಯಾರ್ಥಿಗಳಿಗೆ ಹೇಳಿ ದ್ದೆವು. ಆದರೆ ನಾವು ಊಹಿಸಿದ ಪ್ರಶ್ನೆಗ ಳಿಗೆ ಹೊರತಾದ ಪ್ರಶ್ನೆಗಳು ಸಹ ಕೇಳಿ ರುವುದು ಫಲಿತಾಂಶದ ಪ್ರಮಾಣ ಕಡಿಮೆ ಇನ್ನೊಂದು ಕಾರಣ. ಆದರೆ, ಇಡೀ ರಾಜ್ಯದಲ್ಲಿ ಶೇ 8ರಷ್ಟು ಫಲಿತಾಂಶ ಕಡಿಮೆಯಾಗಿದ್ದರೆ ಉಡುಪಿ ಜಿಲ್ಲೆ ಶೇ5ರಷ್ಟು ಮಾತ್ರ ಕಳೆದುಕೊಂಡಿದೆ ಎಂಬುದು ಸಮಾಧಾನದ ಸಂಗತಿ ಎಂದು ಅವರು ಹೇಳುತ್ತಾರೆ.

2012ರಲ್ಲಿ ಶೇ 89.53ರಷ್ಟು ಫಲಿ ತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದ್ದ ಜಿಲ್ಲೆ 2013ರಲ್ಲಿ 87.68ರಷ್ಟು ಫಲಿ ತಾಂಶ ದಾಖಲಿಸಿ ಮೂರನೇ ಸ್ಥಾನ ಗಳಿ ಸಿತ್ತು. 2014ರಲ್ಲಿ 85.36 ಫಲಿತಾಂಶ ದೊಂದಿಗೆ 16ನೇ ಸ್ಥಾನಕ್ಕೆ ಕುಸಿದಿದ್ದ ಉಡುಪಿ 2015ರಲ್ಲಿ ಶೇ 93.37ರಷ್ಟು ಫಲಿತಾಂಶ ದಾಖಲಿಸಿ ಮತ್ತೆ ಪ್ರಥಮ ಸ್ಥಾನಕ್ಕೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.