ADVERTISEMENT

ಕನಕದಾಸರು ದಾರ್ಶನಿಕ: ಚಿಕ್ಕಣ್ಣ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 6:57 IST
Last Updated 12 ಆಗಸ್ಟ್ 2017, 6:57 IST
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ತಳ ಸಮುದಾಯಗಳ ಸಾಂಸ್ಕೃತಿಕ ಸಂಚಲನ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಮಾತನಾಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ತಳ ಸಮುದಾಯಗಳ ಸಾಂಸ್ಕೃತಿಕ ಸಂಚಲನ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಮಾತನಾಡಿದರು.   

ಉಡುಪಿ: ‘ಕನಕದಾಸರನ್ನು ಭಕ್ತ, ದಾಸ ಹಾಗೂ ಕೀರ್ತನಾಕಾರ ಎಂದು ಶಾಲೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಈವರೆಗೆ ಓದಿಸಲಾಗಿದೆ. ಆದರೆ ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಕಿಟಕಿಯನ್ನು ತೆರೆದು ನೋಡಿದರೆ ಹಲವು ವ್ಯಕ್ತಿತ್ವ ಸೇರಿಕೊಂಡ ವಿಚಾರವಾದಿ ಹಾಗೂ ದಾರ್ಶನಿಕನಾಗಿ ಕನಕದಾಸರು ಕಾಣುತ್ತಾರೆ’ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಹೇಳಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಪೀಠ ಸಂಯುಕ್ತವಾಗಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ತಳ ಸಮುದಾಯಗಳ ಸಾಂಸ್ಕೃತಿಕ ಸಂಚಲನ’ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಮನುಷ್ಯನಾಗಿ ಹುಟ್ಟುವುದು ಬಹಳ ವಿರಳ, ಕವಿಯಾಗುವುದು ಸಹ ಅತ್ಯಂತ ವಿರಳ. ಕವಿ ಮತ್ತು ದಾರ್ಶನಿಕ ಆಗುವುದು ವಿರಳಾತಿ ವಿರಳ ಅಂತಹ ವ್ಯಕ್ತಿತ್ವ ಕನಕದಾಸರದ್ದಾಗಿದೆ’ ಎಂದು ಬಣ್ಣಿಸಿದರು.

ADVERTISEMENT

‘ಭಕ್ತ ಕನಕದಾಸರು ಕೇವಲ ಭಕ್ತಿ ಪಾರಾಯಣ ಮಾಡಲಿಲ್ಲ. ಸಾಮಾಜಿಕ ಚಿಂತನೆಗೆ ಮುಖಾಮುಖಿಯಾದರು. ಮನುಷ್ಯ ಸಂಬಂಧ ಮೌಲ್ಯಗಳನ್ನು ಇಟ್ಟುಕೊಂಡು ಅವರು ಕಾವ್ಯ ರಚಿಸಿದರು. ಅವರ ಕಾವ್ಯಗಳೆಲ್ಲವೂ ಭಕ್ತಿಯ ನೆಲೆಯಾಚೆ ದಾಟುತ್ತವೆ. ದಾಟುವಾಗ ಅವರು ಅಹಂ ಕಳೆದುಕೊಳ್ಳುತ್ತಾರೆ. ಕ್ರಿಯಾಶೀಲತೆ ಎಂದರೆ ಮರಿದು ಕಟ್ಟುವುದು. ಮುರಿದು ಕಟ್ಟುವ ಮೂಲಕ ಮನುಷ್ಯ ಸಮಾಜದ ಹಸನಿಗೆ ಅವರು ಕಾರಣಕರ್ತರಾದರು’ ಎಂದರು.

‘ನಮ್ಮ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಭಾರತೀಯ ಸಂತ ಪರಂಪರೆಯ ತೌಲನಿಕ ಅಧ್ಯಯನದಲ್ಲಿ ಸಹ ತೊಡಗಿದೆ. ಭಾರತೀಯ ಸಂತ ಪರಂಪರೆಯ ಜೊತೆ ಕನಕದಾಸರನ್ನು ನಿಲ್ಲಿಸಲಾಗುತ್ತಿದೆ. ಕರ್ನಾಟಕ ತತ್ವಪದಕಾರರ ಸಮಗ್ರ ಸಾಹಿತ್ಯವನ್ನು 52 ಸಂಪುಟಗಳಲ್ಲಿ ಹೊರ ತರುವ ಐದು ವರ್ಷಗಳ ಯೋಜನೆ ಹಾಕಿಕೊಳ್ಳಲಾಗಿದ್ದು, ಈಗಾಗಲೇ 32 ಸಂಪುಟಗಳನ್ನು ಹೊರ ತರಲಾಗಿದೆ. ಕನಕದಾಸರ ಸಮಗ್ರ ಸಾಹಿತ್ಯವನ್ನು 15 ಭಾಷೆಗಳಿಗೆ ಭಾಷಾಂತರ ಮಾಡುವ ಕೆಲಸವೂ ನಡೆಯುತ್ತಿದೆ’ ಎಂದರು.

‘ಧರ್ಮ, ರಾಷ್ಟ್ರೀಯತೆ ವ್ಯಕ್ತಿಗತ ಆಗದೆ ಸಾರ್ವತ್ರೀಕರಣ ಆಗಬೇಕು. ನಾವು ಕೇವಲ ವ್ಯಾಪಾರ– ವ್ಯವಹಾರ ಸ್ವಾರ್ಥದ ದಿಕ್ಕಿನಲ್ಲಿ ಸಾಗುತ್ತಿರುವುದು ಎಲ್ಲ ಸಂಘರ್ಷಕ್ಕೆ ಮೂಲ ಕಾರಣ. ಇವತ್ತು ನಾವು ಹೇಗಿದ್ದೀವಿ ಎಂದರೆ ಕತ್ತಲೆ ಕೋಣೆಯಲ್ಲಿ ಸೇರಿಕೊಂಡು ಎಲ್ಲ ಬಾಗಿಲು ಕಿಟಕಿ ಮುಚ್ಚಿದ್ದೇವೆ ಮತ್ತು ಬೆಳಕಿಗಾಗಿ ಹುಡುಕಾಡುತ್ತಿದ್ದೇವೆ. ಸಾಮಾಜಿಕ ಪರಿಸ್ಥಿತಿಯಲ್ಲಿಯೂ ಕತ್ತಲೆ ಕೋಣೆಯಲ್ಲಿ ಕುಳಿತು ತಡಕಾಡುತ್ತಿದ್ದೇವೆ. ಬೆಳಕು ಬರಲು ಹೇಗೆ ಸಾಧ್ಯ? ಮೊದಲು ನಮ್ಮ ಕೋಣೆಯನ್ನು ತೆರೆದು ಕೂರಬೇಕು, ಆಗ ಬೆಳಕು, ಗಾಳಿ ಬರುತ್ತದೆ ಹೊಸ ಆಲೋಚನೆ ಬರುತ್ತದೆ’ ಎಂದರು.

ಮಣಿಪಾಲ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್‌.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಪ್ರೊ. ಶಾಂತಾರಾಮ್‌, ಕನಕದಾಸ ಸಂಶೋಧನಾ ಪೀಠದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.