ADVERTISEMENT

ಕಸ್ತೂರಿರಂಗನ್ ವರದಿ ವಿರುದ್ಧ ಬಂದ್ ಪೂರ್ಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 5:47 IST
Last Updated 31 ಜನವರಿ 2015, 5:47 IST

ಪ್ರಜಾವಾಣಿ ವಾರ್ತೆ
ಸುಬ್ರಹ್ಮಣ್ಯ: ಕಸ್ತೂರಿರಂಗನ್ ವರದಿ ವಿರುದ್ಧದ ಹೋರಾಟ­ವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಶುಕ್ರವಾರ ಕರೆ ನಿಡಿದ 46 ಗ್ರಾಮಗಳ ಸ್ವಯಂಪ್ರೇರಿತ ಬಂದ್‌ಗೆ ಸುಬ್ರಹ್ಮಣ್ಯ ಸಹಿತ ಬಹುತೇಕ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲ್ಲೂಕುಗಳ 46 ಗ್ರಾಮಗಳಲ್ಲದೆ, ಕೆಲವು ಪ್ರಮುಖ ಪೇಟೆಗಳಲ್ಲಿ  ಬೆಳಿಗ್ಗೆಯಿಂದಲೇ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಪೂರ್ಣ ಬೆಂಬಲ ನೀಡಿದರು. ಬಂದ್ ಹಾಗೂ ಪ್ರತಿಭಟನೆಗೆ ಸ್ವಯಂ ಇಚ್ಛೆಯಿಂದ ಸಹಕರಿಸಿದ ಎಲ್ಲರಿಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹಾಗೂ ರೈತ ಮುಖಂಡ ಹರೀಶ್ ಇಂಜಾಡಿ ಮತ್ತು ಸಂಘಟಕರು ಅಭಿನಂದನೆ ಸಲ್ಲಿಸಿದ್ದಾರೆ.

ಪುತ್ತೂರು ತಾಲ್ಲೂಕಿನ ಕೊಂಬಾರು, ಬಿಳಿನೆಲೆ, ಅಡ್ಡಹೊಳೆ, ಶಿರಾಡಿ ಮೊದಲಾದೆಡೆ ಬೆಳಿಗ್ಗೆಯಿಂದಲೇ ಬಂದ್‌ನ ವಾತಾವರಣ ಇತ್ತು. ವಾಹನ ಸೌಕರ್ಯವಿದ್ದರೂ ಎಲ್ಲೆಡೆ ಹಾಜರಾತಿ ತೀರಾ ಕಡಿಮೆಯಾಗಿತ್ತು. ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಬಂದ್, ಪ್ರತಿಭಟನೆಗೆ ಸಹಕರಿಸಿದರು.

ಸುಗಮವಾಗಿ ನಡೆದ ಪರೀಕ್ಷೆ: ದ್ವಿತೀಯ ಪಿಯುಸಿ ಪೂರ್ವ ತಯಾರಿ ಪರೀಕ್ಷೆ ನಡೆಯುತ್ತಿದ್ದು, ವಿಜ್ಞಾನ ವಿಭಾಗದವರಿಗೆ ಶುಕ್ರವಾರ ಜೀವ ವಿಜ್ಞಾನ ಪರೀಕ್ಷೆ ಇತ್ತು. ಪರೀಕ್ಷೆ ಯಾವುದೇ ಅಡೆತಡೆ ಇಲ್ಲದೆ, ಎಲ್ಲ ವಿದ್ಯಾರ್ಥಿಗಳು ಹಾಜರಾಗುವುದ­ರೊಂದಿಗೆ ಸುಗಮವಾಗಿ ನಡೆಯಿತು.

ಸುಳ್ಯ ತಾಲ್ಲೂಕಿನ ಬಳ್ಪ, ಯೇನೆಕಲ್ಲು, ಬಾಳುಗೋಡು, ಐನೆಕಿದು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರ, ಕಲ್ಮಕಾರು, ದೇವಚಳ್ಳ ಮೊದಲಾದ ಗ್ರಾಮಗಳಲ್ಲಿ ಜನರು ಬೆಳಿಗ್ಗೆ ಬಂದ್ ನಡೆಸಿ, ವಾಹನದಲ್ಲಿ ಪ್ರತಿಭಟನೆ ನಡೆಯುವ ಸುಬ್ರಹ್ಮಣ್ಯದತ್ತ ನೂರಾರು ಸಂಖ್ಯೆಯಲ್ಲಿ ಬಂದರು. ಏಕಾದಶಿಯಾದ್ದರಿಂದ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ದೇವಳದಲ್ಲಿ ಮಧ್ಯಾಹ್ನ ಭಕ್ತರಿಗೆ ಫಲಾಹಾರ ವ್ಯವಸ್ಥೆ ಇದ್ದು­ದರಿಂದ ಹೆಚ್ಚಿನ ತೊಂದರೆಯಾಗಲಿಲ್ಲ. ಸರ್ಕಾರಿ ಬಸ್‌ಗಳು, ಇತರ ವಾಹನಗಳು ಎಂದಿನಂತೆ ಸಂಚಾರ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.