ADVERTISEMENT

ಡಾ.ಶರತ್‌ ಮರುನೇಮಕಕ್ಕೆ ಆಗ್ರಹ

ಅನಿರ್ದಿಷ್ಟಾವಧಿ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2014, 5:22 IST
Last Updated 20 ಅಕ್ಟೋಬರ್ 2014, 5:22 IST

ಉಡುಪಿ: ‘ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ. ಶರತ್‌ ಕುಮಾರ್‌ ರಾವ್‌ ಅವರು ಖುದ್ದಾಗಿ ಕೆಎಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗಾಗಿ ಅವರ ಅಮಾನತಿನ ಆದೇಶ­ವನ್ನು ಸರ್ಕಾರ ಹಿಂಪಡೆಯಲು ಸಾಧ್ಯವಿಲ್ಲ. ಕೆಎಟಿಯಲ್ಲಿ ತೀರ್ಮಾನ­ವಾದ ಬಳಿಕವೇ ಅಮಾನತಿನ ಆದೇಶ ಇತ್ಯರ್ಥವಾಗಲಿದೆ’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅಮಾನತು ಆದೇಶ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ನೇತೃತ್ವದಲ್ಲಿ ನಗರದ ಭುಜಂಗ ಪಾರ್ಕ್‌ನ ಯುದ್ಧ ಸ್ಮಾರಕದ ಬಳಿ ಭಾನುವಾರ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ  ಮಾತುಕತೆ ನಡೆಸು­ವುದಾಗಿ ಭರವಸೆ ನೀಡಿದರು.

ಡಾ. ಪಿ.ವಿ. ಭಂಡಾರಿ ಮಾತನಾಡಿ, ಡಾ. ಶರತ್‌ ಕುಮಾರ್‌ ಅವರನ್ನು ಅಮಾನತು ಮಾಡಿ ಒಂದು ವರ್ಷ ಒಂದು ತಿಂಗಳಾದರೂ, ಸರ್ಕಾರದಿಂದ ಯಾವುದೇ ತನಿಖಾ ತಂಡವನ್ನು ನೇಮಿಸಿ ವಿಚಾರಣೆ ನಡೆಸಿಲ್ಲ. ಆದ್ದರಿಂದ ತಕ್ಷಣ ವಿಚಾರಣೆ ನಡೆಸಿ, ಪುನರ್‌ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಉಡುಪಿ ಸಿಟಿ ಬಸ್‌ ನಿಲ್ದಾಣದಿಂದ ಅಜ್ಜರಕಾಡು ಯುದ್ಧ ಸ್ಮಾರಕದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾ­ಯಿತು. ಉಡುಪಿ ಜಿಲ್ಲಾಸ್ಪ­ತ್ರೆಯ ಜಿಲ್ಲಾ ಸರ್ಜನ್‌ಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌, ಜಯಕರ್ನಾ­ಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜನನಿ ದಿವಾಕರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್‌, ಕೆ.ಕೆ. ಭಂಡಾರ್ಕರ್‌, ವಿಲಿಯಂ ಮಾರ್ಟಿಸ್‌, ಭಾಸ್ಕರ್‌ ರೈ, ವಿಶುಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.