ADVERTISEMENT

ದ್ವಿಮುಖ ಧೋರಣೆಗೆ ಗ್ರಾಮಸ್ಥರ ಆಕ್ರೋಶ

ಕಟ್‌ಬೇಲ್ತೂರು: ನಿಲುವು ಬದಲಾಯಿಸಿದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2016, 5:14 IST
Last Updated 16 ಮಾರ್ಚ್ 2016, 5:14 IST

ಕುಂದಾಪುರ: ಜನವಸತಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಮೀನು ಸಂಸ್ಕರಣಾ ಕಾರ್ಖಾನೆಯನ್ನು ನಿರ್ಮಿಸಲಾಗುತ್ತಿರು ವುದನ್ನು ತಮ್ಮ ಸಂಘಟನೆಯ ಮೂಲಕ ಪ್ರತಿಭಟನೆ ಮಾಡುವ ಮೂಲಕ ವಿರೋಧಿಸುತ್ತೇವೆ ಎಂದು ಪತ್ರಿಕಾ ಗೋಷ್ಠಿ ನಡೆಸಿ ಹೇಳಿದ್ದ ಜಯ ಕರ್ನಾಟಕ ಸಂಘಟನೆಯವರು, ಬಳಿಕ ತಮ್ಮ ನಿಲುವನ್ನು ಬದಲಾಯಿಸಿಕೊಂಡಿರು ವುದಕ್ಕೆ ಸ್ಥಳೀಯರಿಂದ ವಿರೋಧವನ್ನು ಎದುರಿಸಬೇಕಾದ ಸನ್ನಿವೇಶ ಮಂಗಳವಾರ ಎದುರಾಯಿತು.

ಘಟನೆಯ ವಿವರ: ಹೆಮ್ಮಾಡಿ ಸಮೀಪದ ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲ್ಕುಂದ ಎಂಬಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದ ರಲ್ಲಿ ಉಡುಪಿಯ ಉದ್ಯಮಿಯೊಬ್ಬರು ಮೀನು ಸಂಸ್ಕರಣಾ ಕಾರ್ಖಾನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಕಾರಣದಿಂದ 3–4 ತಿಂಗಳ ಹಿಂದೆ ಸ್ಥಳೀಯ ಗ್ರಾಮಸ್ಥರು ಜನವಸತಿ ಪ್ರದೇಶದಲ್ಲಿ ಫಿಶ್‌ ಮಿಲ್‌ ನಿರ್ಮಾಣಕ್ಕೆ ವಿರೋಧವನ್ನು ವ್ಯಕ್ತಪಡಿಸಿ ಪ್ರತಿಭಟನೆ ಗಳನ್ನು ನಡೆಸಿದ್ದರು. ಇದಕ್ಕೆ ಪ್ರತಿ ಸ್ಪಂದಿಸಿದ್ದ ಕಾರ್ಖಾನೆಯ ಮಾಲೀಕರು ತಾವು ನಿರ್ಮಾಣ ಮಾಡಲು ಹೊರಟಿರುವುದು ಮೀನು ಸಂಗ್ರಹಣಾ ಶೀಥಲಿಕರಣ ಘಟಕ, ಯಾವುದೇ ಕಾರಣಕ್ಕೂ ಫಿಶ್‌ ಮಿಲ್‌ ನಿರ್ಮಾಣ ಮಾಡುವುದಿಲ್ಲ ಹಾಗೂ ಕಾನೂನು ಬದ್ಧವಾದ ಅನುಮತಿಯೊಂದಿಗೆ ಘಟಕ ಸ್ಥಾಪನೆ ಮಾಡುತ್ತೇವೆ ಎಂದು ಸ್ವಷ್ಟೀಕರಿಸುವ ಪ್ರಯತ್ನ ಮಾಡಿದ್ದರು.

ಭಾನುವಾರ ಕುಂದಾಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಯ ಕರ್ನಾ ಟಕ ಸಂಘಟನೆಯ ಪ್ರಮುಖರು, ‘ದೇವಲ್ಕುಂದದಲ್ಲಿ ಫಿಶ್‌ ಮಿಲ್‌ ನಿರ್ಮಾ ಣವನ್ನು ವಿರೋಧಿಸಿ ಮಂಗಳವಾರ ತಾವು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ. ಇದಕ್ಕೆ ಸ್ಥಳೀಯ ಗ್ರಾಮಸ್ಥರಲ್ಲದೆ ಜಿಲ್ಲೆಯ ಬೇರೆ ಬೇರೆ ಕಡೆಯಿಂದ ಸಂಘಟನೆಯ ಕಾರ್ಯಕರ್ತರು ಬರಲಿದ್ದಾರೆ’ ಎಂದು ಹೇಳಿದ್ದರಲ್ಲದೆ, ತಮ್ಮ ಉದ್ದೇಶಿತ ಪ್ರತಿಭಟನೆಯನ್ನು ಅಧಿಕಾರಿಗಳ ಮೂಲಕ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು.

ಬೆಳಿಗ್ಗೆ 10.30 ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದರೂ, ಜಿಲ್ಲಾ ಸಂಘಟನೆಯ ಪ್ರಮುಖರು ತಡವಾಗಿಯೇ ಸ್ಥಳಕ್ಕೆ ಬಂದಿದ್ದರಲ್ಲದೆ, ಇಲ್ಲಿ ನಿರ್ಮಾಣವಾಗುತ್ತಿರುವುದು ಫಿಶ್‌ ಮಿಲ್‌ ಅಲ್ಲ, ಮೀನು ಶೀಥಲಿಕರಣ ಘಟಕ ಮಾತ್ರ ಹಾಗೂ ಇದಕ್ಕಾಗಿ ಪಡೆದು ಕೊಂಡಿರುವ ಅನುಮತಿ ಪತ್ರಗಳು ಕ್ರಮ ಬದ್ಧವಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾಗಿರುವುದು ಸ್ಥಳೀಯ ರನ್ನು ಕೆರಳಿಸಿದೆ.

ನಿಲುವು ಬದಲಾಯಿ ಸಿದ ಕಾರಣವನ್ನು ಪ್ರಶ್ನಿಸಲು ಮುಂದಾ ದವರಿಗೂ ಸರಿಯಾದ ಉತ್ತರಗಳು ದೊರಕಲಿಲ್ಲ. ಸಾಂಕೇತಿಕವಾಗಿ ಗ್ರಾಮ ಪಂಚಾಯಿತಿಗೆ ಮನವಿ ನೀಡಿದ ಸಂಘಟನೆಯ ಪ್ರಮುಖರು ತಮ್ಮ ವಾಹನಗಳಲ್ಲಿ ಹಿಂತಿರುಗಿದ ಘಟನೆಯೂ ನಡೆಯಿತು. ಜಿಲ್ಲಾ ಸಂಘಟನೆಯ ನಿಲುವಿನ ಕುರಿತು ಬೇಸರ ವ್ಯಕ್ತ ಪಡಿಸಿದ ಸಂಘಟನೆಯ ಸ್ಥಳೀಯ ಪ್ರಮುಖರು ಹಾಗೂ ಗ್ರಾಮದ ಪ್ರಮುಖರು ಗ್ರಾಮಸ್ಥರ ಹೋರಾಟದಲ್ಲಿ ನಾವಿದ್ದೇವೆ ಎನ್ನುವ ಭರವಸೆಯ ಮಾತುಗಳನ್ನು ವ್ಯಕ್ತಪಡಿಸಿದರು. ಜಯಕರ್ನಾಟಕ ಜಿಲ್ಲಾ ಸಂಘಟನೆಯ ಜನನಿ ದಿವಾಕರ ಶೆಟ್ಟಿ, ಸಲಹೆಗಾರ ಸುಧಾಕರ ರಾವ್‌, ಸ್ಥಳೀಯ ಘಟಕದ ಅಧ್ಯಕ್ಷ ಪ್ರಕಾಶ್‌ ಮೊಗವೀರ, ಹೆಮ್ಮಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜೂ ಪೂಜಾರಿ, ಹಟ್ಟಿಯಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ  ಸಂತೋಷ್‌ ಶೆಟ್ಟಿ ತೋಟಬೈಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.