ADVERTISEMENT

ಪಡಿತರ ವಿತರಣೆಯ ಅಕ್ರಮ ತಡೆಗೆ ಜಾಗೃತಿ ಸಮಿತಿ: ಸಚಿವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:58 IST
Last Updated 14 ಏಪ್ರಿಲ್ 2017, 5:58 IST
ಉಡುಪಿಯ ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅನ್ನಭಾಗ್ಯ’ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಫಲಾನುಭವಿಗಳಿಗೆ ಅಕ್ಕಿ ವಿತರಿಸಿದರು.  –ಪ್ರಜಾವಾಣಿ ಚಿತ್ರ
ಉಡುಪಿಯ ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅನ್ನಭಾಗ್ಯ’ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಫಲಾನುಭವಿಗಳಿಗೆ ಅಕ್ಕಿ ವಿತರಿಸಿದರು. –ಪ್ರಜಾವಾಣಿ ಚಿತ್ರ   

ಉಡುಪಿ: ‘ಪಡಿತರ ವಿತರಣೆಯಲ್ಲಿ ಆಗುವ ಅಕ್ರಮವನ್ನು ತಡೆಗಟ್ಟುವ ಸಲುವಾಗಿ ಪ್ರತಿ ನ್ಯಾಯ ಬೆಲೆ ಅಂಗಡಿಗಳಲ್ಲಿ 5 ಜನರನ್ನೊಳಗೊಂಡ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ತೂಕದಲ್ಲಿ ಆಗುವ ಮೋಸ, ಆಹಾರ ಧಾನ್ಯಗಳ ಗುಣಮಟ್ಟವನ್ನು ಕಾಪಾಡು ವುದು ಈ ಸಮಿತಿಯ ಜವಾಬ್ದಾರಿ ಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅನ್ನಭಾಗ್ಯ’ ಉಚಿತ ಹೆಚ್ಚುವರಿ ಅಕ್ಕಿ ವಿತರಣೆ ಕಾರ್ಯಕ್ರಮ ಹಾಗೂ ಜಾಗೃತಿ ಸಮಿತಿ ಸದಸ್ಯರ ಕಾರ್ಯಾಗಾರದಲ್ಲಿ ಫಲಾನುಭ ವಿಗಳಿಗೆ ಅಕ್ಕಿ ವಿತರಿಸಿ ಮಾತನಾಡಿದರು.

‘ಬಿಪಿಎಲ್‌ ಕಾರ್ಡ್‌ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ₹1.20 ಲಕ್ಷ ಆದಾಯ ಮಿತಿ ಇರುವವರು ಹಾಗೂ 150 ಯೂನಿಟ್‌ ವಿದ್ಯುತ್‌ ಬಳಕೆ ಮಾಡುವವರು ಬಿಪಿಎಲ್‌ ಕಾರ್ಡ್‌ ಪಡೆಯಬಹು ದಾಗಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರದ ಸಹಯೋಗ ದೊಂದಿಗೆ ಉಜ್ವಲ ಯೋಜನೆಯಡಿ ₹1,500ಕ್ಕೆ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆ ಜಾರಿಯಲ್ಲಿದೆ’ ಎಂದು ಹೇಳಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ತೋನ್ಸೆ, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ಬ್ರಹ್ಮಾವರ ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಇತರರು ಉಪಸ್ಥಿತರಿದ್ದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಉಪನಿರ್ದೇಶಕ ಪ್ರವೀಣ್‌ ಬಿ. ನಾಯಕ್‌ ಸ್ವಾಗತಿಸಿದರು.

*
ಫಲಾನುಭವಿಗಳ ಆಧಾರ್‌ ಕಾರ್ಡ್‌ ಜೋಡಣೆಯಿಂದಾಗಿ ಅನ್ನಭಾಗ್ಯ ಯೋಜನೆಯಲ್ಲಿ ಆಗುತ್ತಿದ್ದ ಅಕ್ರಮಗಳು ಹತೋಟಿಗೆ ಬಂದಿದ್ದು, ಇದರಿಂದ ಸಾಕಷ್ಟು ಲಾಭವಾಗಿದೆ.
–ಪ್ರಮೋದ್ ಮಧ್ವರಾಜ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT