ADVERTISEMENT

ಮೂವರಿಗೆ ಪ್ರಶಸ್ತಿ ಪ್ರದಾನ

ಅಂಬಲಪಾಡಿ ಯಕ್ಷಗಾನ ಮಂಡಳಿ: ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 5:16 IST
Last Updated 24 ಜನವರಿ 2017, 5:16 IST
ಮೂವರಿಗೆ ಪ್ರಶಸ್ತಿ ಪ್ರದಾನ
ಮೂವರಿಗೆ ಪ್ರಶಸ್ತಿ ಪ್ರದಾನ   

ಉಡುಪಿ: ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ ಯ 59ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಂತಾರಾಮ ಆಚಾರ್ಯ ಅವರಿಗೆ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ನಾರಾಯಣ ಶೆಟ್ಟಿಗಾರ್‌ ಅವರಿಗೆ ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಕೂರಾಡಿ ಸದಾಶಿವ ಕಲ್ಕೂರರಿಗೆ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌ ಅವರು ಪ್ರದಾನ ಮಾಡಿದರು.

ಆ ನಂತರ ಮಾತನಾಡಿದ ಅವರು, ಅಂಬಲಪಾಡಿ ಯಕ್ಷಗಾನ ಮಂಡಳಿಯು ಉಳಿದ ಸಂಸ್ಥೆಗಳಿಗೆ ಮಾದರಿ ಎಂಬಂತೆ  ಕಲಾಸೇವೆ ಮಾಡುತ್ತಿದ್ದು, ಮುಂದೆ ನಡೆಯುವ ವಜ್ರಮಹೋತ್ಸವಕ್ಕೆ ದೇವಸ್ಥಾನದಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು. ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕಿ ವಿದ್ಯಾಲಕ್ಷ್ಮೀ ವಹಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೂರಾಡಿ ಸದಾಶಿವ ಕಲ್ಕೂರ, ಅಂಬಲ ಪಾಡಿ ಮಂಡಳಿಯವರು ನನ್ನನ್ನು ಗುರುತಿಸಿದ್ದಕ್ಕೆ ಅಭಾರಿಯಾಗಿದ್ದೇನೆ.  ಪತ್ನಿ ಯಶೋದಾ ಎಸ್. ಕಲ್ಕೂರರ ಹೆಸರಿನಲ್ಲಿ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು. ಕಾರ್ಯದರ್ಶಿ ಕೆ.ಜೆ. ಕೃಷ್ಣ  ವರದಿ ವಾಚಿಸಿದರು.

ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ಜೆನೆಟಿಕ್ಸ್‌ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಕಟ್ಟಾ, ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ವಸುಮತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಇದ್ದರು.  ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಕೋಶಾಧಿ ಕಾರಿ ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು. ಅಜಿತ್ ಕುಮಾರ್ ವಂದಿಸಿದರು. ಕಾರ್ಯಕ್ರಮದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನವಾಯಿತು.

***
ಯಕ್ಷಗಾನ ಸರ್ವಾಂಗ ಪರಿಪೂರ್ಣ ಕಲೆಯಾಗಿದ್ದು, ಈ ಕಲೆಯ ಬೆಳವಣಿಗೆಗಾಗಿ ಕರ್ನಾಟಕ ಬ್ಯಾಂಕ್ ನಿರಂತರ ಆರ್ಥಿಕ ನೆರವು ನೀಡುತ್ತಾ ಬಂದಿದೆ.
-ವಿದ್ಯಾಲಕ್ಷ್ಮೀ
ಎಜಿಎಂ ಕರ್ನಾಟಕ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.