ADVERTISEMENT

ರಾಜ್ಯದಲ್ಲಿ ಅಧಿಕ ವನ್ಯಜೀವಿ ಸಂಪತ್ತು

‘ನೀರಿಗಾಗಿ ಅರಣ್ಯ’ ವನಮಹೊತ್ಸವ: ಅರಣ್ಯ ಪರಿಸರ, ಜೀವಶಾಸ್ತ್ರ ಸಚಿವ ಬಿ.ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 9:23 IST
Last Updated 25 ಜುಲೈ 2017, 9:23 IST
ವನಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ನೀರಿಗಾಗಿ ಅರಣ್ಯ’ ಕಾರ್ಯಕ್ರಮವನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ
ವನಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ನೀರಿಗಾಗಿ ಅರಣ್ಯ’ ಕಾರ್ಯಕ್ರಮವನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾವಾಣಿ ಚಿತ್ರ   

ಉಡುಪಿ: ‘ದೇಶದಲ್ಲಿ ಅಧಿಕ ಪ್ರಮಾಣ ವನ್ಯ ಜೀವಿ ಸಂಪತ್ತನ್ನು ಕರ್ನಾಟಕ ಹೊಂದಿದೆ. ಇತರ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಹುಲಿ, ಆನೆ, ಸಿಂಗಳೀಕ, ಚಿರತೆ ವನ್ಯ ಜೀವಗಳ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ’ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ಕಾನೂನು ಪ್ರಾಧಿಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ನೀರಿಗಾಗಿ ಅರಣ್ಯ’ ವನಮಹೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ‘ವನ್ಯ ಜೀವಿಗಳ ರಕ್ಷಣಾ ಕಾಯ್ದೆ ಬಂದ ನಂತರ ರಾಜ್ಯದಲ್ಲಿ ಶೇ 70 ರಿಂದ ಶೇ 80ರಷ್ಟು ವನ್ಯ ಜೀವಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದರು.

ಪ್ರತಿಯೊಬ್ಬರು ತಮ್ಮ ರಕ್ಷಣೆಯ ಜೊತೆಗೆ ಪ್ರಾಣಿಗಳ ರಕ್ಷಣೆ ಮಾಡಿ ವನ್ಯ ಜೀವಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯದ ಜನರ ವಿರೋಧ ಇರುವ ಕಾರಣ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಹುಲಿ ಯೋಜನೆಯನ್ನು ತಿರಸ್ಕರಿಸಲಾಗಿದೆ ಎಂದರು.

ADVERTISEMENT

‘ಜಾಗತಿಕ ಮಟ್ಟದ ಹವಾಮಾನ ವೈಪರೀತ್ಯದ ಪರಿಣಾಮ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಜೀವ ಜಲದ ಉಗಮ ಸ್ಥಾನ ಅರಣ್ಯ, ಭವಿಷ್ಯದ ದೃಷ್ಟಿಯಿಂದ ಕಾಡನ್ನು ಸಂರಕ್ಷಿಸುವ ಅಗತ್ಯವಿದೆ’ ಎಂದು ಹೇಳಿದರು.

‘ಇದನ್ನು ಉಳಿಸಿ ಬೆಳೆಸಲು ಸಾರ್ವಜನಿಕರ ಸಹಕಾರ ಅಗತ್ಯ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸಹ ನಮ್ಮೊಂದಿಗೆ ಕೈ ಜೋಡಿಸುವುದರ ಮೂಲಕ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿಸಬೇಕು’ ಎಂದರು.

‘ಈ ಹಿಂದೆ ವಿವಿಧ ಕಾರಣಗಳಿಗಾಗಿ ಅರಣ್ಯ ನಾಶ ಮಾಡಲಾಗುತಿತ್ತು. ಅರಣ್ಯ ಸಂರಕ್ಷಣೆ ಕಾಯ್ದೆ ಬಂದ ನಂತರ ರಾಜ್ಯದಲ್ಲಿ 30 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೆಚ್ಚಾಗಿದೆ’ ಎಂದರು.

22ರಷ್ಟಿರುವ ಅರಣ್ಯ ಶೇ33ಕ್ಕೆ ಏರಿಕೆಯಾದರೆ ಮಾತ್ರ ಪರಿಸರ ಸುಸ್ಥಿತಿಗೆ ಬರಲು ಸಾಧ್ಯ ಎಂದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಡಾ.ಸಂಜಯ್ ಎಸ್.ಬಿಜ್ಜೂರು  ಪ್ರಾಸ್ತವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಮಣಿಪಾಲ ತಾಂತ್ರಿಕ ಸಂಸ್ಥೆಯ ನಿರ್ದೇಶಕ ಜಿ.ಕೆ. ಪ್ರಭು, ವನ್ಯ ಜೀವಿ ಪರಿಪಾಲಕ ಎಂ.ರವಿರಾಜ್, ರೋಟರಿ ಕಾರ್ಯದರ್ಶಿ ಬಾಲಕೃಷ್ಣ ಮದ್ದೋಡಿ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ  ಕಾರ್ಯದರ್ಶಿ ಲತಾ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಉಪಸ್ಥಿತರಿದ್ದರು.

*
ಭವಿಷ್ಯದಲ್ಲಿ ಇನ್ನೊಂದು ಮಹಾಯುದ್ಧ ಆಗುವುದಾದರೆ ಅದು ಕೇವಲ ನೀರಿಗಾಗಿ ಮಾತ್ರ.
-ಪ್ರಮೋದ್ ಮಧ್ವರಾಜ್,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.