ADVERTISEMENT

ರಾಮ ಮಂದಿರ ನಿರ್ಮಾಣ, ಮತಾಂತರ ನಿಷೇಧ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 8:50 IST
Last Updated 10 ಸೆಪ್ಟೆಂಬರ್ 2017, 8:50 IST

ಉಡುಪಿ: ‘ಸಮಾಜದಲ್ಲಿ ಅಶಾಂತಿ ಹಾಗೂ ತಳಮಳ ಇದ್ದು ಅದರಿಂದ ವಿಮುಕ್ತಿ ಪಡೆಯಬೇಕೆಂದರೆ ಧರ್ಮದ ಪುನರ್ ಸ್ಥಾಪನೆ ಆಗಬೇಕು. ರಾಮ ಮಂದಿರ ನಿರ್ಮಾಣ, ಗೋ ಹತ್ಯೆ ಮತ್ತು ಮತಾಂತರ ನಿಷೇಧ ಹಾಗೂ ಹಿಂದೂ ಸಮಾಜದವರಲ್ಲಿ ಸಾಮರಸ್ಯ ಮೂಡಿಸುವ ಮೂಲಕ ಶಾಂತಿಯನ್ನು ಮರುಸ್ಥಾಪಿಸಬಹುದು’ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅಭಿಪ್ರಾಯಪಟ್ಟರು.

ನವೆಂಬರ್‌ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆಯುವ ಧರ್ಮ ಸಂಸತ್‌ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ‘ಈ ಎಲ್ಲ ನಿರ್ಣಯಗಳನ್ನು ಕಾರ್ಯಗತಗೊಳಿಸುವ ಶಕ್ತಿ ಧರ್ಮ ಸಂಸತ್‌ ಮೂಲಕ ಸಿಗಲಿ’ ಎಂದರು.

ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋ ಹತ್ಯೆ ನಿಷೇಧ, ಹಿಂದೂಗಳಲ್ಲಿ ಸಾಮರಸ್ಯ ಹಾಗೂ ಮತಾಂತರ ನಿಷೇಧದ ಬಗ್ಗೆ ಧರ್ಮ ಸಂಸತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ವಿವಿಧ ಜಾತಿಗಳ ಸುಮಾರು 2 ಸಾವಿರ ಮುಖಂಡರ ಸಭೆಯನ್ನು ನವೆಂಬರ್ 26ರಂದು ನಡೆಸುವ ಯೋಚನೆ ಇದೆ. ಅದೇ ದಿನ ನಡೆಯುವ ಭವ್ಯ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವರು’ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ‘ವೈಚಾರಿಕ, ಸಾಂಸ್ಕೃತಿಕ ಮತ್ತು ಅಧಿಕಾರದ ದಾಳಿ ದೇಶದ ಮೇಲೆ ನಡೆಯುತ್ತಿದೆ. ಧರ್ಮ ನಿಂದನೆ ಹಾಗೂ ಗುರು ಪೀಠ ನಾಶ ಮಾಡುವ ವಿಕೃತಿ ನಡೆಯುತ್ತಿದೆ. ರಾಮ ರಹೀಮನಾದಾಗ ಹೆಚ್ಚು ಚರ್ಚೆ ಆಗುವುದಿಲ್ಲ, ಅದೇ ರಹೀಮ ರಾಮನಾದಾಗ ದೊಡ್ಡ ಮಟ್ಟದ ಚರ್ಚೆ ನಡೆಯುತ್ತದೆ’ ಎಂದರು.

‘ಲವ್‌ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ. ಖುದ್ದು ಸುಪ್ರೀಂ ಕೋರ್ಟ್‌ ಇಂತಹ ಪ್ರಕರಣವೊಂದನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಿದೆ. ಅಹಿಂದ ಮೂಲಕ ಸಮಾಜವನ್ನು ಒಡೆಯಲಾಗುತ್ತಿದೆ. ಲಿಂಗಾಯತ, ವೀರಶೈವ ಧರ್ಮ ಎಂದು ವಿಂಗಡಿಸುವ ಮೂಲಕ ಧರ್ಮಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇವೆಲ್ಲದಕ್ಕೂ ತಕ್ಕ ಉತ್ತರ ಕೊಬೇಕು’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಪೇಜಾವರ ಸ್ವಾಮೀಜಿ ಅವರ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಬರಬೇಕು ಎಂಬ ಇಚ್ಛೆ ಹೊಂದಿದ್ದಾರೆ. ಧರ್ಮ ಸಂಸತ್‌ಗೆ  ಸಹ ಬರುವ ನಿರೀಕ್ಷೆ ಇದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿಎಚ್‌ಪಿ ಸರ ಸಂಘ ಚಾಲಕ ಮೋಹನ್ ಭಾಗವತ್‌ ಧರ್ಮ ಸಂಸತ್‌ನಲ್ಲಿ ಭಾಗವಹಿಸುವರು. ’ಎಂದು ಹೇಳಿದರು. ವಿಎಚ್‌ಪಿ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ್‌, ಮಣಿಪಾಲ್ ಟೆಕ್ನಾಲಜಿಸ್ ಲಿಮಿಟೆಡ್‌ನ ನಿರ್ದೇಶಕ ಗೌತಮ್ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.