ADVERTISEMENT

ಸಂಕಷ್ಟಹರ ಚತುರ್ಥಿಯ ವಿಶಿಷ್ಟ ಸೇವೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 7:39 IST
Last Updated 18 ಮಾರ್ಚ್ 2017, 7:39 IST

ಕುಂದಾಪುರ: ಗುರುವಾರ ನಡೆದ ಸಂಕಷ್ಟಹರ ಚತುರ್ಥಿ ಅಂಗವಾಗಿ ಇಲ್ಲಿಗೆ ಸಮೀಪದ ಕುಂಭಾಸಿ ಪ್ರಸಿದ್ದ ಶ್ರೀ ಆನೆಗುಡ್ಡೆ ಸಿದ್ದಿವಿನಾಯಕ ದೇವಸ್ಥಾನ ದಲ್ಲಿ ದೇವರಿಗೆ 12 ಸಾವಿರ ಕಡುಬು (ಮೂಡೆ) ಸಮರ್ಪಣೆ ಮಾಡುವ ಮೂಲಕ ವಿಶಿಷ್ಟ ಸೇವೆ ನಡೆಸಲಾಯಿತು.

ಕರಾವಳಿ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಆನೆಗುಡ್ಡೆ ಗಣಪನ ನಿತ್ಯ ಸೇವೆಗಳಲ್ಲಿ ಕಡುಬು ಸೇವೆ ಒಂದಾಗಿದ್ದರೂ ನಿನ್ನೆ ನಡೆದ ಕಡುಬು ಸೇವೆಗಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗಿತ್ತು. ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ದೊಡ್ಡ ಸಂಖ್ಯೆ ಕಡುಬು ಸೇವೆಯನ್ನು ದೇವರಿಗೆ ಅರ್ಪಿಸಲಾಗಿತ್ತಾದರೂ, ಇಷ್ಟೊಂದು ದೊಡ್ಡ ಪ್ರಮಾಣದ ಕಡುಬುಗಳನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಸಮರ್ಪಣೆ ಮಾಡಿರುವುದು ದೇಗುಲದ ಇತಿಹಾಸದಲ್ಲಿ ಇದೆ ಮೊದಲು ಎಂದು ಪರ್ಯಾಯ ಅರ್ಚಕರಾದ ಕೆ.ರವಿರಾಜ ಉಪಾಧ್ಯಾಯ ಹೇಳಿದರು.

ಈ ಅಪರೂಪದ ಸೇವೆಯನ್ನು ಸಲ್ಲಿಸಿದವರು ದೇವಸ್ಥಾನದ ಅನುವಂಶಿಕ ಅರ್ಚಕರ ಕುಟುಂಬದವರಾದ  ಕೃಷ್ಣಾ ನಂದ ಉಪಾಧ್ಯಾಯ ಹಾಗೂ ಅವರ ಕುಟುಂಬದವರು. ಗಣಪತಿ ಸನ್ನಿಧಾ ನದಲ್ಲಿ ನಡೆಯುವ ಅಪರೂಪದ ಕಡುಬು ನೈವೇದ್ಯ ಸೇವೆಯನ್ನು ಕಣ್ತುಂಬಿ ಕೊಳ್ಳಲು ಸಾವಿರಾರು ಮಂದಿ ಭಕ್ತರು ದೇವಳದಲ್ಲಿ ಸೇರಿದ್ದರು. ದೇವರಿಗೆ ಸಮರ್ಪಣೆ ಮಾಡಿದ ಬಳಿಕ ಪೂಜೆ ಹಾಗೂ ಇತರ ಧಾರ್ಮಿಕ ವಿಧಿಯನ್ನು ನೆರವೇರಿಸಿದ ಬಳಿಕ ಕಡುಬು ಪ್ರಸಾದ ರೂಪವಾಗಿ ಭಕ್ತರಿಗೆ ಹಂಚಲಾಯಿತು.

ADVERTISEMENT

ಮೂಡೆ ತಯಾರಿಗಾಗಿ ಸಿದ್ಧತೆ: ಮೊದಲ ಬಾರಿ ದೇವಸ್ಥಾನದಲ್ಲಿ ನಡೆದ ಈ ಸೇವೆಗಾಗಿ ಪರ್ಯಾಯ ಅರ್ಚಕರು ಹಾಗೂ ಆಡಳಿತ ಮಂಡಳಿ ಸಾಕಷ್ಟು ಪೂರ್ವ ಸಿದ್ಧತೆಯನ್ನು ಮಾಡಿ ಕೊಂಡಿತ್ತು. 12 ಸಾವಿರ ಮೂಡೆಗಳ ತಯಾರಿಗಾಗಿ 400 ಕೆಜಿ ಅಕ್ಕಿ ಹಾಗೂ 100 ಕೆಜಿ ಉದ್ದು ಬಳಸಲಾಗಿತ್ತು. 12 ಸಾವಿರ ಮೂಡೆಗಳ ತಯಾರಿಗಾಗಿ ಓಲೆಗಳನ್ನು ಒಟ್ಟು ಮಾಡುವುದೆ ಒಂದು ಸವಾಲಿನ ಕೆಲಸವಾಗಿತ್ತು. 10 ದಿನಗಳಿಂದ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜಾಲಾಡಿ ಮೂಡೆಗಳ ತಯಾರಿಕೆ ಓಲೆ ಕಲೆ ಹಾಕಲಾಗಿತ್ತು. ಓಲೆಗಳು ದೇವಸ್ಥಾನಕ್ಕೆ ಬಂದು ಸೇರುತ್ತಿದ್ದಂತೆ  ಅಲ್ಲಿದ್ದ 20ಕ್ಕೂ ಅಧಿಕ ಮಹಿಳೆಯರು ಅದನ್ನು ಸುರುಳಿ ಮಾಡಿ ಕೊಟ್ಟೆ ರೂಪಕ್ಕೆ ಪರಿವರ್ತಿಸುವ ಕೆಲಸವನ್ನು ಮಾಡಿದ್ದರು. ಕಡುಬಿನ ಹಿಟ್ಟು ತಯಾರಿಕೆಗಾಗಿ 7 ಗ್ರೈಂಡರ್‌ ಬಳಸಲಾಗಿತ್ತು.  ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆಯ ವರೆಗೆ 22 ಮಂದಿ ಬಾಣಸಿಗರ ಶ್ರಮ ದಿಂದಾಗಿ ಬೆಳಿಗ್ಗೆ 7 ಗಂಟೆಗೆ 12,000 ಮೂಡೆ ದೇವರ ನೈವೇದ್ಯಕ್ಕಾಗಿ ಸಿದ್ಧವಾಗಿತ್ತು.

-ರಾಜೇಶ್‌ ಕೆ.ಸಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.