ADVERTISEMENT

ಸಿಆರ್‌ಜೆಡ್‌ ಸಮಸ್ಯೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 10:15 IST
Last Updated 4 ಜುಲೈ 2017, 10:15 IST

ಕುಂದಾಪುರ: ರಾಜ್ಯದಲ್ಲಿ ಜಾರಿ ಇರುವ ಸಿಆರ್‌ಜೆಡ್‌ ಕಾನೂನುಗಳಿಂದಾಗಿ ಕರಾವಳಿ ತೀರ ಪ್ರದೇಶದ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಖ್ಯಸ್ಥರಿಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಲಾಗಿದೆ. ನೆರೆಯ ಕೇರಳ ಹಾಗೂ ಗೋವಾ ರಾಜ್ಯದಲ್ಲಿ ಅನುಷ್ಠಾನದಲ್ಲಿ ಇರುವ ನಿಯಮಾವಳಿಯಂತೆ ಇಲ್ಲಿಯೂ ಕ್ರಮ ಕೈಗೊಳ್ಳಲು ಸರ್ಕಾರ ಇಲಾಖಾ ಸಮೀಕ್ಷೆ ನಡೆಸಲಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಉಡುಪಿ ಜಿಲ್ಲಾ ಪಂಚಾಯಿತಿ ಹಾಗೂ ಮೀನು ಗಾರಿಕಾ ಇಲಾಖೆಯ ಆಶ್ರಯದಲ್ಲಿ ನಡೆದ ಮೀನುಗಾರಿಕಾ ಮಾಹಿತಿ ಕಾರ್ಯಾಗಾರ ಹಾಗೂ ಇಲಾಖಾ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ವೈಜ್ಞಾನಿಕವಾಗಿ ನಡೆಯುವ ಸಮೀ ಕ್ಷೆಯ ವರದಿಯ ಆಧಾರದಲ್ಲಿ, ಕರಾವಳಿ ಪ್ರದೇಶದಲ್ಲಿನ ಜನರ ಮನೆ ನಿರ್ಮಾಣ ಹಾಗೂ ಇತರ ಕಾಮಗಾರಿಗಳು ಸಲೀಸಾಗುವ ವಿಶ್ವಾಸವಿದೆ.

ADVERTISEMENT

ಮೀನುಗಾರರಿಗೆ ನೀಡಲಾಗುವ ಸೀಮೆಎಣ್ಣೆಯ ಸಹಾಯ ಹಣವನ್ನು ನೇರವಾಗಿ ಮೀನುಗಾರರ ಖಾತೆಗಳಿಗೆ ಜಮಾ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ನಾಡದೋಣಿ ಮೀನುಗಾರರ ಒಕ್ಕೂಟದಿಂದ ಮುಖ್ಯ ಮಂತ್ರಿಗೆ ಮನವಿ ಮಾಡಲಾಗಿದ್ದು, ಅವರು ಈ ಕುರಿತು ಸಕಾರಾತ್ಮಕವಾಗಿ ಸ್ವಂದಿಸಿದ್ದಾರೆ ಎಂದು ಹೇಳಿದರು.

ಕರಾವಳಿ ಭಾಗದ ಬಂದರು ಸೇರಿದಂತೆ ಮೀನುಗಾರರಿಗೆ ಅನುಕೂಲ ವಾಗುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಸಮುದ್ರ ತೀರ ಪ್ರದೇಶದ ಕೊರೆತಗಳ ತಡೆಗಾಗಿ ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಯೋಜನೆಗಳನ್ನು ಹಮ್ಮಿಕೊಳ್ಳಲು ಸರ್ಕಾರ ಉದ್ದೇಶಿಸಿರು ವುದಾಗಿ ಅವರು ತಿಳಿಸಿದರು.

ಅರ್ಹ ಫಲಾನುಭವಿಗಳಿಗೆ ಐಸ್‌ ಪೆಟ್ಟಿಗೆ, ಮೀನುಗಾರಿಕಾ ಬುಟ್ಟಿ, ಗ್ಲೌಸ್, ಮೀನು ಗಾರಿಕಾ ಬಲೆ ಸೇರಿದಂತೆ ಸರ್ಕಾರದ ನೀಡುವ ಸವಲತ್ತುಗಳನ್ನು ನೀಡಲಾಯಿತು.
ಕೋಟೇಶ್ವರದ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮ್ಮಿ ಮಂಜು ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಖಂಬದಕೋಣೆ ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಮೀನುಗಾರಿಕಾ ಇಲಾಖೆಯ ಅಧಿಕಾರಿ ಪಾರ್ಶ್ವನಾಥ ಹಾಗೂ ಚಂದ್ರಶೇಖರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.