ADVERTISEMENT

ಹುಲಿ ಯೋಜನೆ: ಒಕ್ಕಲೆಬ್ಬಿಸಲು ಬಿಡುವುದಿಲ್ಲ- ಮೊಯಿಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 5:23 IST
Last Updated 1 ಸೆಪ್ಟೆಂಬರ್ 2014, 5:23 IST

ಹೆಬ್ರಿ: ‘ಜನತೆ ಆತಂಕ ಪಡುವ ಅಗತ್ಯ ಇಲ್ಲ. ಕೇಂದ್ರ ಸರ್ಕಾರ ಹುಲಿ ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದ ದರ್ಪದಿಂದ ಜನ ವಿರೋಧಿ ಯೋಜನೆಯನ್ನು ಪ್ರಕಟಿಸುತ್ತಿದೆ. ಮುಂದೆ ಜನತೆ ಮೂಲ ಹಕ್ಕಿಗಾಗಿ ಹೋರಾಡುವ ಸ್ಥಿತಿ ಬರಲಿದೆ ಜನತೆ ಎಚ್ಚೆತ್ತುಕೊಳ್ಳಬೇಕು’ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದರು.

ಅಂಡಾರಿನಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಡಾರು, ಶಿರ್ಲಾಲು, ಕೆರ್ವಾಸೆ ಪರಿಸರದ ಹುಲಿ ಯೋಜನೆ ಸಂತ್ರಸ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಒಂಬತ್ತು ವರ್ಷಗಳಿಂದ ಮಾಡಲಾಗದ ಪಡಿತರ ಚೀಟಿನ ಸಮಸ್ಯೆಯನ್ನು ಕಾಂಗ್ರೆಸ್ ಸರ್ಕಾರ ಸರಿಪಡಿಸಿ ಸಾಕಷ್ಟು ಮಂದಿಗೆ ಪಡಿತರ ಕಾರ್ಡು ನೀಡಿದ್ದೇವೆ. ನಾವು ಜನರ ಬದುಕಿನಲ್ಲಿ ರಾಜಕೀಯ ಮಾಡುವುದಿಲ್ಲ. ಜನರ ಬದುಕಿಗಾಗಿ ಹೋರಾಟ ಮಾಡುತ್ತೇವೆ’ ಎಂದು ವೀರಪ್ಪ ಮೊಯಿಲಿ ಹೇಳಿದರು.

ಮಾಜಿ ಶಾಸಕ ಗೋಪಾಲ ಭಂಡಾರಿ ಅವರು ಮಾತನಾಡಿ, ‘ಕೇಂದ್ರ ಸರ್ಕಾರ ಹುಲಿ ಯೋಜನೆಯನ್ನು ಜಾರಿ ಮಾಡುತ್ತಿದ್ದರೂ ಶಾಸಕ ಸುನಿಲ್ ಕುಮಾರ್ ಜನರಿಗೆ ತಪ್ಪು ಮಾಹಿತಿ ನೀಡಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಖರ ಮಡಿವಾಳ್, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ, ಡಾ.ಸಂತೋಷ ಕುಮಾರ್ ಶೆಟ್ಟಿ ಅಜೆಕಾರು, ಕಾಂಗ್ರೆಸ್ ವಕ್ತಾರ ಬಿಪಿನ್‌್ ಚಂದ್ರಪಾಲ ನಕ್ರೆ, ಹೆಬ್ರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ ಆಚಾರ್ಯ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್, ವರಂಗ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಪಡುಕುಡೂರು ಜಗದೀಶ ಹೆಗ್ಡೆ, ವಿಠ್ಠಲ ಪೂಜಾರಿ, ವರಂಗ ಸಿಎ ಬ್ಯಾಂಕ್ ಅಧ್ಯಕ್ಷ ರವಿ ಪೂಜಾರಿ, ದುರ್ಗಾ ಪಂಚಾಯಿತಿ ಅಧ್ಯಕ್ಷ ಕೃಷ್ಣ ಪೂಜಾರಿ, ಕಾಂಗ್ರೆಸ್ ಪ್ರಮುಖರಾದ ಪಡುಕುಡೂರು ಪ್ರಸನ್ನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.