ADVERTISEMENT

‘ಉತ್ತರಗಳನ್ನು ಪ್ರಶ್ನಿಸುವ ಮನೋಭಾವ ಅಗತ್ಯ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 9:45 IST
Last Updated 29 ಜುಲೈ 2014, 9:45 IST

ಕಾರ್ಕಳ: ‘ಇಂದು ಜಾಗತಿಕ ಕೌಶಲ್ಯ ಹಾಗೂ ಸಾಮರ್ಥ್ಯದಲ್ಲಿ ಗುರುತರ ಬದಲಾವಣೆಯಾಗಿದೆ. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರಿಸುವ ಮನೋ­ಭಾವ ಬಿಟ್ಟು ಉತ್ತರಗಳನ್ನು ಪ್ರಶ್ನಿಸುವ ಮನೋ­ಭಾವ ಬೆಳೆಸಿಕೊಳ್ಳಬೇಕು’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಪಿ.ಎಸ್. ಯಡಪಡಿತ್ತಾಯ ಹೇಳಿದರು.

ಇಲ್ಲಿನ  ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಂಗಣದಲ್ಲಿ ಈಚೆಗೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ನಿರ್ವಹಣಾ ಅಧ್ಯಾಪಕ ಸಂಘ ಆಯೋಜಿ­ಸಿದ ‘ಜಾಗತಿಕ ಅರ್ಥವ್ಯವಸ್ಥೆ ಹಾಗೂ ಆಡಳಿತ ನಿರ್ವಹಣೆಯ ಉದಯನ್ಮೋಖ ವಿಚಾರಗಳು ಹಾಗೂ ಸವಾಲುಗಳು’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗತಿಕವಾಗಿ ನಾವು ಅರ್ಹರು ಎನಿಸಿಕೊಳ್ಳ­ಬೇಕಾದರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳ­ಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೆ.ಜಿ.ಯಿಂದ ಪಿ.ಜಿ.ಯವರೆಗೆ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಮಾತ್ರ ಹೇಳಿಕೊಡುತ್ತಿದ್ದೇವೆ. ವಿದ್ಯಾರ್ಥಿಗಳು ಇದರಲ್ಲೇ ಹಿತಾನುಭವ ಪಡೆಯುತ್ತಿದ್ದಾರೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಜಾಗತಿಕ ನೆಲೆಗಟ್ಟಿನಲ್ಲಿ ನಾವು ಸ್ಪರ್ಧೆ ಒಡ್ಡಬೇಕಾದರೆ ಜಾಗತಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸವಾಲುಗಳು ಹಾಗೂ ವಿಚಾರಗಳನ್ನು ಮಾತ­ನಾಡುವ ಮೊದಲು ನಮ್ಮನ್ನು ನಾವು ಆತ್ಮಶೋಧನೆ ಮಾಡಿಕೊಂಡಾಗ  ಮಾತ್ರ ಇಂತಹ ಸವಾಲುಗಳಿಗೆ ನಮ್ಮನ್ನು ನಾವು ಸಮರ್ಥವಾಗಿ ಒಡ್ಡಕೊಳ್ಳ­ಬಹುದು.

ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಪದವಿ ಪ್ರಮಾಣಪತ್ರ ಹೊಂದಿದ ಮಾನವ ಸಂಪನ್ಮೂಲ ಬೇಕಾಗಿಲ್ಲ. ಇಂದು ಸಾಮರ್ಥ್ಯ ಎಂದರೆ ಶೈಕ್ಷಣಿಕ ಅರ್ಹತೆಯಲ್ಲ. ಉತ್ತಮರಲ್ಲಿ ಅತ್ಯುತ್ತಮರ ಅವಶ್ಯಕತೆ ಇದೆ. ಸಾಮರ್ಥ್ಯವನ್ನು ಪುನರ್ ವ್ಯಾಖ್ಯಾನಿಸುವ ಕಾಲ ಬಂದಿದೆ’ ಎಂದರು.

  ವಿಚಾರ ಸಂಕಿರಣದಲ್ಲಿ ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಚಂದ್ರಶೇಖರ್ ಶೆಟ್ಟಿ, ನಗರ ಎಎಸ್‌ಪಿ ಅಣ್ಣಾಮಲೈ, ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಯಶವಂತ ಡೋಂಗ್ರೆ ಮೊದಲಾದವರು ವಿವಿಧ ಗೋಷ್ಠಿಗಳನ್ನು ನಡೆಸಿಕೊಟ್ಟರು.

ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಕೆ.ಶಾಂತರಾಮ್ ಕಾಮತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ವೆಂಕಟ್ರ­ಮಣ ಗೌಡ, ವಾಣಿಜ್ಯ ನಿರ್ವಹಣಾ ಅಧ್ಯಾಪಕರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಉಪ­ಸ್ಥಿತರಿದ್ದರು. ವಿಚಾರ ಸಂಕಿರಣ ಸಂಯೋಜಕ ಡಾ. ಮಂಜು­ನಾಥ ಕೋಟ್ಯಾನ್ ಸ್ವಾಗತಿಸಿದರು. ವಾಣಿಜ್ಯ ನಿರ್ವಹಣಾ ಅಧ್ಯಾಪಕರ ಸಂಘದ ಅಧ್ಯಕ್ಷ ನಂದಕಿಶೋರ್ ಕೆ. ವಂದಿಸಿದರು. ಉಪನ್ಯಾಸಕಿ ಕೀರ್ತಿ ಡಿ.ತಂತ್ರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.