ADVERTISEMENT

‘ಯೋಗದಿಂದ ಎಲ್ಲ ಒತ್ತಡ ದೂರ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2014, 5:10 IST
Last Updated 13 ಆಗಸ್ಟ್ 2014, 5:10 IST
ಪೂರ್ಣಪ್ರಜ್ಞ ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್‌ ಸಿದ್ದಾಪುರ ಅವರ ‘ಯೋಗ ವಿಹಾರ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ. ಸದಾಶಿವ ರಾವ್‌, ಶ್ರೀಕಾಂತ್ ಸಿದ್ದಾಪುರ, ಕಸ್ತೂರಬಾ ವೈದ್ಯಕೀಯ ಕಾಲೇಜಿನ ಯೋಗ ವಿಭಾಗದ ಪ್ರಾಧ್ಯಾಪಕಿ ಡಾ. ಅನ್ನಪೂರ್ಣ ಆಚಾರ್ಯ ಇದ್ದಾರೆ. 	ಪ್ರಜಾವಾಣಿ ಚಿತ್ರ
ಪೂರ್ಣಪ್ರಜ್ಞ ಕಾಲೇಜಿನ ಮಿನಿ ಅಡಿಟೋರಿಯಂನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್‌ ಸಿದ್ದಾಪುರ ಅವರ ‘ಯೋಗ ವಿಹಾರ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ. ಸದಾಶಿವ ರಾವ್‌, ಶ್ರೀಕಾಂತ್ ಸಿದ್ದಾಪುರ, ಕಸ್ತೂರಬಾ ವೈದ್ಯಕೀಯ ಕಾಲೇಜಿನ ಯೋಗ ವಿಭಾಗದ ಪ್ರಾಧ್ಯಾಪಕಿ ಡಾ. ಅನ್ನಪೂರ್ಣ ಆಚಾರ್ಯ ಇದ್ದಾರೆ. ಪ್ರಜಾವಾಣಿ ಚಿತ್ರ   

ಉಡುಪಿ: ‘ಭಾರತೀಯ ಋಷಿ– ಮುನಿಗಳು ಜಗತ್ತಿಗೆ ಯೋಗವನ್ನು ಕೊಡುಗೆಯಾಗಿ ನೀಡಿದ್ದಾರೆ. ದೈಹಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಪರಿಹಾರ ಯೋಗದಲ್ಲಿದೆ’ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನ ಸಾಂಸ್ಕೃತಿಕ ಸಂಘ ಮತ್ತು ಕನ್ನಡ ವಿಭಾಗ ಕಾಲೇಜಿನ ಮಿನಿ ಅಡಿಟೋರಿಯಂ­ನಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್‌ ಸಿದ್ದಾಪುರ ಅವರ ‘ಯೋಗ ವಿಹಾರ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಾಯಿಲೆಯನ್ನು ವಾಸಿ ಮಾಡಿಕೊಳ್ಳಲು ಇಂಗ್ಲಿಷ್‌ ಔಷಧಿಗಳನ್ನು ಸೇವಿಸಿದರೆ ಅದರ ಅಡ್ಡ ಪರಿ­ಣಾಮದಿಂದ ಇನ್ನೊಂದು ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಆದರೆ ಯೋಗದಿಂದ ಅಂತಹ ಯಾವುದೇ ಅಡ್ಡ ಪರಿಣಾಮಗಳಾಗದು. ಮಾನಸಿಕ ಸಮ­ತೋಲನ ಕಾಪಾಡಿಕೊಳ್ಳಲು ಯೋಗ ಸಹಕಾರಿ. ವಿದ್ಯಾರ್ಥಿಗಳು ಪರೀಕ್ಷಾ ಒತ್ತಡದಿಂದ ಬಳಲುತ್ತಾರೆ. ಯೋಗದಿಂದ ಎಲ್ಲ ರೀತಿಯ ಒತ್ತಡಗಳನ್ನು ದೂರ ಮಾಡಬಹುದು ಎಂದರು.

ಯೋಗ ಮಾಡಿ ವೃದ್ಧಾಪ್ಯವನ್ನು ಮುಂದೂಡ­ಬಹುದು. ವಿದ್ಯಾರ್ಥಿಗಳು ಯೋಗದ ಮೂಲಕ ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತ ದೇಶ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

‘ಒತ್ತಡ ನಿವಾರಣೆ ಮತ್ತು ದೈನಂದಿನ ಜೀವನ ಶೈಲಿಯನ್ನು ಸುಧಾರಣೆ ಯೋಗದಿಂದ ಸಾಧ್ಯ. ಮನಸ್ಸಿನ ನಿಗ್ರಹವೂ ಇದರಿಂದ ಆಗಲಿದೆ. ಯೋಗ ಮಾಡುವುದರಲ್ಲಿ ಶ್ರದ್ಧೆ ಮತ್ತು ನಿರಂತರತೆ ಇರ­ಬೇಕು. ವಾರಕ್ಕೆ ಕನಿಷ್ಠ ಐದು ದಿನ ನಿಗದಿತ ಸಮಯ­ದಲ್ಲಿ ಯೋಗ ಮಾಡಬೇಕು ಮತ್ತು ಅದು ನಿರಂತರ­ವಾಗಿರಬೇಕು. ಆಗ ಮಾತ್ರ ಯೋಗದ ಲಾಭ ಪಡೆದು­ಕೊಳ್ಳಲು ಸಾಧ್ಯ’ ಎಂದು ಕಸ್ತೂರಬಾ ವೈದ್ಯಕೀಯ ಕಾಲೇಜಿನ ಯೋಗ ವಿಭಾಗದ ಪ್ರಾಧ್ಯಾಪಕಿ ಡಾ. ಅನ್ನಪೂರ್ಣ ಆಚಾರ್ಯ ಹೇಳಿದರು.

ಕೃತಿಯ ಕುರಿತು ಲೇಖಕ ಶ್ರೀಕಾಂತ್‌ ಸಿದ್ದಾಪುರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ. ಸದಾಶಿವ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಸಿ ವಿದ್ಯಾರ್ಥಿನಿ ಶರಧಿ ಪಾಟೀಲ್‌ ಪ್ರಾರ್ಥನೆ, ಕಾಲೇಜಿನ ಉಪ ಪ್ರಾಂಶುಪಾಲ ಡಾ. ಜಗದೀಶ್‌ ಶೆಟ್ಟಿ ಸ್ವಾಗತ ಮತ್ತು ಪ್ರಜ್ಞಾ ಮಾರ್ಪಳ್ಳಿ ವಂದನಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.