ADVERTISEMENT

ಅನುದಾನಕ್ಕೆ ಕಾಯುತ್ತಿರುವ ಯಾತ್ರಿ ನಿವಾಸ

ಮೊದಲ ಹಂತದ ಕಾಮಗಾರಿ ಪೂರ್ಣ; ಎರಡನೇ ಹಂತದ ನೆರವಿಗೆ ಪ್ರಸ್ತಾವ ಸಲ್ಲಿಕೆ

ಸಂಧ್ಯಾ ಹೆಗಡೆ
Published 20 ಮಾರ್ಚ್ 2017, 7:17 IST
Last Updated 20 ಮಾರ್ಚ್ 2017, 7:17 IST
ಶಿರಸಿಯ ಗೋಲಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ
ಶಿರಸಿಯ ಗೋಲಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಯಾತ್ರಿ ನಿವಾಸ   

ಶಿರಸಿ: ನಗರದ ಮಾರಿಕಾಂಬಾ ದೇವಾಲಯಕ್ಕೆ ಬರುವ ಪ್ರವಾಸಿಗರಿಗೆ ತಂಗುವ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಗೋಲಗೇರಿಯಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವು ಇನ್ನಷ್ಟು ಸುಸಜ್ಜಿತಗೊಳ್ಳಲು ಸರ್ಕಾರದ ಅನುದಾನಕ್ಕಾಗಿ ಕಾಯುತ್ತಿದೆ.

ಪ್ರವಾಸೋದ್ಯಮ ಇಲಾಖೆ ಒದಗಿಸಿದ್ದ ₹ 1 ಕೋಟಿ ಅನುದಾನದಲ್ಲಿ ನಗರದ 26ನೇ ವಾರ್ಡಿನ ಗೋಲಗೇರಿ ಕೆರೆಯ ಪಕ್ಕದಲ್ಲಿರುವ ಮಾರಿಕಾಂಬಾ ದೇವಾಲಯದ ನಿವೇಶನದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. 2015ರ ಏಪ್ರಿಲ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಈ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು.

ಕಾಮಗಾರಿಯ ಗುತ್ತಿಗೆ ಪಡೆದಿದ್ದ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮವು 12 ಕೊಠಡಿಗಳು, ಒಂದು ಸಭಾಭವನ ಹೊಂದಿರುವ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಪೂರ್ಣ ಗೊಳಿಸಿದೆ. ದೊಡ್ಡ ಕೊಠಡಿಗಳನ್ನು ಹೊಂದಿರುವ ಕಟ್ಟಡದಲ್ಲಿ ಅಂದಾಜು 100 ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸಬಹುದಾಗಿದೆ.

‘ಮಾರಿಕಾಂಬಾ ದೇವಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ಯಾತ್ರಿ ನಿವಾಸದ ಬೇಡಿಕೆ ಇಟ್ಟಾಗ ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ಅನುದಾನ ಒದಗಿಸಿದ್ದರು. ದೇವಾಲಯದಲ್ಲಿ ಹಾಲಿ ಇರುವ ಛತ್ರವು ಹಳೆಯದಾಗಿದ್ದು ಇಲ್ಲಿಯೇ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿ ಗರಿಷ್ಠ 150 ಜನರಿಗೆ ತಂಗಲು ಅವಕಾಶವಿದೆ. ಹೊಸ ಕಟ್ಟಡ ಸಧ್ಯದಲ್ಲಿಯೇ ದೇವಾಲಯಕ್ಕೆ ಹಸ್ತಾಂತರವಾಗಲಿದೆ. ನಂತರದಲ್ಲಿ ಈ ಕಟ್ಟಡವನ್ನು ಪ್ರವಾಸಿಗರ ವಸತಿಗೆ ಮುಕ್ತಗೊಳಿಸಲಾಗುವುದು’ ಎನ್ನುತ್ತಾರೆ ದೇವಾಲಯದ ಬಾಬುದಾರ ಹಾಗೂ ಈ ಭಾಗದ ನಗರಸಭೆ ಸದಸ್ಯರಾಗಿರುವ ಜಗದೀಶ ಗೌಡ.

‘ಪ್ರವಾಸಿಗರ ಸಂಖ್ಯೆ ಗಮನ ದಲ್ಲಿಟ್ಟು ಕೊಂಡು ಯಾತ್ರಿ ನಿವಾಸದ ಇನ್ನೆರಡು ಮಹಡಿಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.  ಮೊದಲ ಹಾಗೂ ಎರಡನೇ ಮಹಡಿಗೆ ಸೇರಿ ₹2 ಕೋಟಿ ಪ್ರಸ್ತಾವದ ಯೋಜನೆ ಸಿದ್ಧವಾಗಿದೆ. ಈ ಕಾಮಗಾರಿಗೆ ಶೀಘ್ರ ಮಂಜೂರು ಸಿಕ್ಕರೆ ಯಾತ್ರಿ ನಿವಾಸದಲ್ಲಿ 300ರಷ್ಟು ಪ್ರವಾಸಿಗರಿಗೆ ಏಕಕಾಲಕ್ಕೆ ವಸತಿ ವ್ಯವಸ್ಥೆ ಒದಗಿಸಬಹುದು.

ಸರ್ಕಾರದಿಂದ ಅನುಮತಿ ದೊರೆತು ಕಟ್ಟಡದ ಮುಂದಿನ ಹಂತದ ಕಾಮಗಾರಿ ಬೇಗ ಆರಂಭವಾಗಬ ಹುದೆಂಬ ನಿರೀಕ್ಷೆ ಯಿಂದ ಪೂರ್ಣಗೊಂಡಿರುವ ಕಟ್ಟಡಕ್ಕೆ ಇನ್ನೂ ಬಣ್ಣ ಬಳಿಯಲಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT