ADVERTISEMENT

‘ಕಾಲುದಾರಿಗೆ ಇಂಟರ್‌ಲಾಕ್‌ ಟೈಲ್ಸ್‌ ಅಳವಡಿಸಿ’

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:41 IST
Last Updated 20 ಮೇ 2017, 5:41 IST

ಕಾರವಾರ: ‘ನಗರದ ಖಾರ್ವಿವಾಡದಲ್ಲಿ ಕೆಲಭಾಗದ ಕಾಲುದಾರಿಗೆ ಇಂಟರ್‌ಲಾಕ್‌ ಟೈಲ್ಸ್‌ ಅಳವಡಿಸಲಾಗಿದ್ದು, ಏರಿಯಾದ ಉಳಿದ ಕಡೆಗೂ ಅದನ್ನು ಹಾಕಬೇಕು’ ಎಂದು ಒತ್ತಾಯಿಸಿ ಸ್ಥಳೀಯ ಶ್ರೀಕಾಂತ್‌ ಬಾನಾವಳಿಕರ ಶುಕ್ರವಾರ ಪೌರಾಯುಕ್ತ ಯೋಗೇಶ್ವರ್‌ಗೆ ಮನವಿ ಸಲ್ಲಿಸಿದರು.

‘ಇಲ್ಲಿನ ನಗರಸಭೆಯ 5ನೇ ವಾರ್ಡ್‌ನ ಸದಸ್ಯ ರವೀಂದ್ರ ಬಾನಾವಳಿಕರ ಅವರು ದುರ್ಗಾ-ಮಾರಿಕಾಂಬಾ ದೇವಾಲಯದಿಂದ ತಮ್ಮ ಮನೆಯವರೆಗಿನ ಕಾಲುದಾರಿಗೆ ನಗರಸಭೆ ಅನುದಾನದಲ್ಲಿ ಇಂಟರ್‌ಲಾಕ್‌ ಟೈಲ್ಸ್‌ ಹಾಕಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ಆಪ್ತರ ಮನೆ ಅಂಗಳಕ್ಕೂ ಟೈಲ್ಸ್‌ ಹಾಕಿಸಿದ್ದು, ಉಳಿದೆಡೆಗೆ ಹಾಕಿಸದೇ ತಾರತಮ್ಯ ಎಸಗಿದ್ದಾರೆ’ ಎಂದು ಆರೋಪಿಸಿದರು.

‘ಸಾರ್ವಜನಿಕರು ಸಂಚರಿಸುವ ಕಾಲುದಾರಿಗೂ ಟೈಲ್ಸ್‌ ಹಾಕಿಸುವಂತೆ ಬೇಡಿಕೆ ಇಟ್ಟರೂ ಸದಸ್ಯರು ಕೇಳುತ್ತಿಲ್ಲ. ಅಲ್ಲದೇ ತಮ್ಮ ಬೆಂಬಲಿಗರನ್ನು ಛೂ ಬಿಟ್ಟು ನಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ 8 ತಿಂಗಳ ಹಿಂದೆ ಇದ್ದ ನಗರಸಭೆ ಪೌರಾಯುಕ್ತರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹುಸಿ ಭರವಸೆ ನೀಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಕ್ರಮಕ್ಕೆ ಸೂಚನೆ: ‘ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಿದ್ದರೆ ಇಂಟರ್‌ಲಾಕ್‌ ಟೈಲ್ಸ್‌ ಹಾಕಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪೌರಾಯುಕ್ತ ಯೋಗೇಶ್ವರ್‌ ಭರವಸೆ ನೀಡಿದರು.

ಸ್ಥಳ ಪರಿಶೀಲನೆ: ಪೌರಾಯುಕ್ತರ ಸೂಚನೆಯಂತೆ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಂ.ಮೋಹನರಾಜ್‌ ಖಾರ್ವಿವಾಡಕ್ಕೆ ತೆರಳಿ ಸ್ಥಳ ಪರಿಶೀಲನೆ  ನಡೆಸಿದರು.

ಬಳಿಕ ಮಾತನಾಡಿದ ಅವರು, ‘ಬಾಕಿ ಉಳಿದಿರುವ ಜಾಗವು ನಗರಸಭೆಗೆ ಸೇರಿಲ್ಲ. ಹೀಗಾಗಿ ಈ ಸ್ಥಳಕ್ಕೆ ಇಂಟರ್‌ಲಾಕ್‌ ಟೈಲ್ಸ್‌ ಹಾಕಲು ಕಾನೂನಿನಲ್ಲಿ ಅವಕಾಶ ಇಲ್ಲ.         ಒಂದು ವೇಳೆ ಸಂಬಂಧಪಟ್ಟ ಜಾಗವನ್ನು ನಗರಸಭೆಗೆ ಬರೆದುಕೊಟ್ಟರೆ, ಟೈಲ್ಸ್‌ ಅಳವಡಿಸಬಹುದು. ಈ ಬಗ್ಗೆ ಒಪ್ಪಿಗೆ ಪತ್ರ ಬರೆದುಕೊಡಿ’ ಎಂದು ಸ್ಥಳೀಯರಿಗೆ ತಿಳಿಸಿದರು.
ಸ್ಥಳೀಯರಾದ ಶ್ಯಾಮ್ ಸುರಂಗೇಕರ, ಪ್ರಭಾಕರ ಸುರಂಗೇಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.