ADVERTISEMENT

ಕೇಂದ್ರ ದ ಅನುಮತಿಯಿಂದಲೇ ಸಮಸ್ಯೆ

ಮತ್ಸ್ಯಕ್ಷಾಮ; ಅಸಾಂಪ್ರದಾಯಿಕ ಮೀನುಗಾರಿಕೆಯೇ ಕಾರಣ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 7:29 IST
Last Updated 12 ಜನವರಿ 2017, 7:29 IST
ಕೇಂದ್ರ ದ ಅನುಮತಿಯಿಂದಲೇ ಸಮಸ್ಯೆ
ಕೇಂದ್ರ ದ ಅನುಮತಿಯಿಂದಲೇ ಸಮಸ್ಯೆ   
ಅಂಕೋಲಾ: ಮತ್ಸ್ಯಕ್ಷಾಮದಿಂದಾಗಿ ಕಡಲ ತೀರ ಅವಲಂಬಿಸಿ ಸಾಂಪ್ರ­ದಾಯಿಕ ಮೀನುಗಾರಿಕೆಯಿಂದ ಬದುಕು ಕಟ್ಟಿಕೊಂಡಿರುವ ಮೀನುಗಾರರು ಅತಂತ್ರರಾಗಿದ್ದಾರೆ. ಇದಕ್ಕ ಕೇಂದ್ರ ಸರ್ಕಾರ ಅಸಾಂಪ್ರದಾಯಿಕ ಮೀನು­ಗಾರಿಕೆಗೆ ಅನುಮತಿ ನೀಡಿರುವುದೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
 
ಮುಖ್ಯವಾಗಿ ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ.  ಕೇಂದ್ರ ಸರ್ಕಾರ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಮೀನುಗಾರಿಕೆ ನಡೆಸಲು ಭಾರೀ ಗಾತ್ರದ ಯಾಂತ್ರಿಕ ದೋಣಿಗಳಿಗೆ 2017ರ ಮಾರ್ಚ್‌ ತಿಂಗಳವರೆಗೆ ಅವಕಾಶ ನೀಡಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.
 
‘ಆಳ ಸಮುದ್ರದಲ್ಲಿ ರಾತ್ರಿ ವೇಳೆ ಹೈವೊಲ್ಟೇಜ್ ಜನರೇಟರ್ ಮೂಲಕ ಎಲ್.ಇ.ಡಿ. ಬಲ್ಬ್‌ ಉರಿಸಿ ಮೀನು­ಗಳನ್ನು ಬೆಳಕಿನ ಕಡೆಗೆ ಆಕರ್ಷಿಸಲಾ­ಗುತ್ತದೆ. ತಂಡೋಪ ತಂಡವಾಗಿ ಬೆಳಕಿನ ಸುತ್ತ ಸುಳಿಯುವ ಮೀನುಗಳಿಗೆ ಬಲೆ ಬೀಸಿ ಹಿಡಿಯ­ಲಾಗುತ್ತದೆ. ಇದು ಅಪಾ­ಯಕಾರಿ ಅಸಾಂಪ್ರದಾಯಿಕ ಮೀನು­ಗಾರಿಕೆ­­­ಯಾಗಿದೆ. ಇದರಿಂದ ಮತ್ಸ್ಯ ಸಂತತಿ ನಾಶವಾಗುತ್ತದೆ. ಇದೇ ರೀತಿ ಪಶ್ಚಿಮ ಕರಾವಳಿಯಲ್ಲಿನ ಅಪರೂಪದ ಮೀನಿನ ತಳಿಯಾಗಿರುವ ನುಚ್ಗೆ ಜಾತಿಯ ಮೀನು­ಗಳನ್ನು ಅಸಾಂ­ಪ್ರ­ದಾಯಿಕ ಮೀನು­ಗಾರಿಕೆ ನಡೆಸು­ವವರು ಮೋಸದ ತಂತ್ರ ಬಳಸಿ ಹಿಡಿ­ಯುತ್ತಿರುವುದು ಅವರ ಧನದಾಹಕ್ಕೆ ಸಾಕ್ಷಿಯಾಗಿದೆ’ ಎಂದು   ಸಾಗರ ಜೀವ ವಿಜ್ಞಾನಿ ಡಾ. ವಿ.ಎನ್. ನಾಯಕ  ತಿಳಿಸಿದ್ದಾರೆ.
 
‘ವೈಜ್ಞಾನಿಕವಾಗಿ ಸ್ಕ್ವಿಡ್ ಗುಂಪಿಗೆ ಸೇರಿದ ಈ ಮೀನುಗಳು ನವೆಂಬರ್‌­ನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಸಂತಾನೋತ್ಪತ್ತಿ ಪ್ರಾರಂಭಿಸುತ್ತವೆ. ಆದರೆ ಈ ಮೀನುಗಳು ದ್ರಾಕ್ಷಿ ಗೊಂಚಲು ಆಕೃತಿಯಲ್ಲಿ ಮೊಟ್ಟೆ ಇಡಲು ಆಧಾರ ಅಗತ್ಯವಿರುತ್ತದೆ. ಅಸಾಂಪ್ರದಾ­ಯಿಕ ಮೀನುಗಾರಿಕೆ ನಡೆಸು­ವವರು ಗಾಳಿ ಮರದ ಟೊಂಗೆಗಳನ್ನು ಸಮುದ್ರದಲ್ಲಿ ಹಾಕಿ ಅಲ್ಲಿ ಮೊಟ್ಟೆ ಇಡಲು ಬರುವ ನುಚ್ಗೆ ಮೀನುಗಳನ್ನು ಬಲೆ ಬೀಸಿ ಹಿಡಿಯುತ್ತಾರೆ. ಈ ಮೀನುಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಈ ತಂತ್ರವನ್ನು ಬಳಸಲಾಗುತ್ತದೆ. ಇದರಿಂದಾಗಿ ಮತ್ಸ್ಯ ಸಂತತಿಗೆ ವಿನಾಶದ ಅಂಚಿಗೆ ತಲುಪಿದೆ. ಕಿಂಗ್‌ಫಿಶ್ ಎನ್ನಲಾಗುವ ಈಶೋಣ ಮೀನಿನ ಸಂತತಿ ಸಹ ಕ್ಷೀಣವಾಗಿದೆ’ ಎಂದು ನಾಯಕ ತಿಳಿಸಿದರು.
 
ಈ ಅಸಾಂಪ್ರದಾಯಿಕ ಮೀನು­ಗಾರಿಕೆಯ ಸಾಧಕ–ಬಾಧಕ ಚರ್ಚಿಸಲು ಸರ್ಕಾರ ಬೆಂಗಳೂರಿನಲ್ಲಿ ಕಳೆದ, ಡಿಸೆಂಬರ್ 20ರಂದು ಅಧಿಕಾರಿಗಳು ಮತ್ತು ಮೀನುಗಾರರ ಸಭೆ ಆಯೋಜಿಸಿದ್ದಿತು. ಆದರೆ ಈ ಸಭೆಯಲ್ಲಿ ಸಾಂಪ್ರದಾಯಿಕ ಮೀನುಗಾರರ ಸಂಘಟನೆ  ಭಾಗವಹಿಸಿಲ್ಲ.  ಅಸಾಂಪ್ರ­ದಾಯಿಕ ಮೀನುಗಾರಿಕೆ ನೆರೆಯ ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳಲ್ಲೂ ಚಾಲ್ತಿಯಲ್ಲಿದೆ. ಇದೀಗ ಕೇಂದ್ರ ಸರ್ಕಾರ ಮಾರ್ಚ ಅಂತ್ಯದವರೆಗೆ ಇದಕ್ಕೆ ಅನುಮತಿ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
-ಸಿದ್ಧಲಿಂಗಸ್ವಾಮಿ ವಸ್ತ್ರದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.