ADVERTISEMENT

‘ಚಿತ್ರಿಗಿ ಸಸ್ಯೋದ್ಯಾನ’ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:43 IST
Last Updated 8 ಜುಲೈ 2017, 7:43 IST

ಕುಮಟಾ: ಅರಣ್ಯ ಇಲಾಖೆಯ ಟ್ರೀ ಪಾರ್ಕ್ ಯೋಜನೆಯಡಿ ಅತ್ಯಂತ ಮುತುವರ್ಜಿ ಹಾಗೂ ವ್ಯವಸ್ಥಿತವಾಗಿ ಸುಮಾರು 5 ಹೆಕ್ಟೇರ್ ಪ್ರದೇಶದಲ್ಲಿ  ₹40 ಲಕ್ಷ ವೆಚ್ಚದಲ್ಲಿ ರೂಪಿಸಿದ ‘ ಚಿತ್ರಿಗಿ ಸಸ್ಯೋದ್ಯಾನ’ ಜುಲೈ 9ರಂದು ಉದ್ಘಾಟನೆಯಾಗಲಿದೆ.

ಹೆಚ್ಚಾಗಿ ಕಲ್ಲು ಬಂಡೆಯೇ ತುಂಬಿರುವ ಚಿತ್ರಿಗಿ ಅರಣ್ಯದ ಈ ಎತ್ತರ ಪ್ರದೇಶದಲ್ಲಿ ಹಿಂದೆ ಸ್ಥಳೀಯ ಪುರಸಭೆ  ಒಂದು ಉದ್ಯಾನವನ ರೂಪಿಸುವ ಪ್ರಯತ್ನ ನಡೆಸಿತ್ತು. ಆದರೆ ವ್ಯವಸ್ಥಿತ ಯೋಜನೆ, ಅನುಷ್ಠಾನ, ಹಣಕಾಸು ತೊಂದರೆಯ ಕಾರಣದಿಂದ ಅದು ಮುಂದುವರಿಯಲಿಲ್ಲ. ಅದೇ ಜಾಗದಲ್ಲಿ ಈಗ ಅರಣ್ಯ ಇಲಾಖೆ ‘ಟ್ರೀ ಪಾರ್ಕ್’ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಸಸ್ಯೋದ್ಯಾನದಲ್ಲಿ ಆಲ, ರಕ್ತಚಂದ,  ನಾಗಲಿಂಗ ಪುಷ್ಪ, ನಾಗಬೆತ್ತ, ಹಾಲಬೆತ್ತ, ಹಂದಿ ಬೆತ್ತ ( ಪೊಲೀಸ್ ಲಾಠಿಗೆ ಬಳಸುವುದು), ಶ್ರೀಗಂಧ, ಬೀಟೆ, ಸಾಗುವಾನಿ, ಕಿಂದಾಳ, ಮತ್ತಿ, ಹೊನಗಲು, ನಂದಿ, ಹೊನ್ನೆ, ಬೆಟ್ಟೊನ್ನೆ, ಮಾವು, ಹಲಸು, ಬರಣಗಿ, ರಾಮಪತ್ರೆ, ಮುರುಗಲು, ಬಿಳಿ ಮುರುಗಲು ಸೇರಿ ಸುಮಾರು 70 ಜಾತಿಯ ಕಾಡು ಗಿಡಗಳನ್ನು ಬೆಳೆಸಲಾಗಿದೆ.  ಪ್ರವೇಶ ದ್ವಾರದ ಒಳಗೆ ಬದಿಯಲ್ಲಿ ಪುಟ್ಟ ‘ನವಗ್ರಹ ವನ’ವನ್ನು ನಿರ್ಮಿಸಲಾಗಿದೆ.

‘ಸಸ್ಯೋದ್ಯಾನಕ್ಕೆ ತಾಗಿಕೊಂಡಿರುವ ಉಳಿದ 9 ಹೆಕ್ಟೇರ್ ಪ್ರದೇಶದಲ್ಲಿ  ಮುಂದೆ ವಾಕಿಂಗ್ ಲೇನ್, ಯೋಗ ಪ್ಲ್ಯಾಟ್‌ಫಾರ್ಮ್, ಬಟರಫ್ಲೈ ಗಾರ್ಡನ್, ಕುಳಿತುಕೊಳ್ಳಲು ಆಸನ, ಕುಡಿಯುವ ನೀರು, ಸೋಲರ್ ಬೆಳಕಿನ ವ್ಯವಸ್ಥೆ, ಶೌಚಾಲಯ, ರಕ್ಷಣಾ ಸಿಬ್ಬಂದಿ ಕಚೇರಿ ಮುಂತಾದವುಗಳ ನಿರ್ಮಿಸಬೇಕಿದೆ’ ಎಂದು ಕುಮಟಾ ಸಹಾಯಕ ಅರಣ್ಯ ಸಂಸಕ್ಷಣಾಧಿಕಾರಿ ಎಸ್.ವಿ. ನಾಯ್ಕ ಮಾಹಿತಿ ನೀಡಿದರು.

ADVERTISEMENT

‘ಈಗ ₹40 ಲಕ್ಷ ವೆಚ್ಚದಲ್ಲಿ ಸಸ್ಯೋದ್ಯಾನ ಅಭಿವೃದ್ಧಿಯ ಜೊತೆ ಮಕ್ಕಳ ಉದ್ಯಾನವನ, ಕ್ಯಾಂಟೀನ್, ಪ್ಯಾರಾಗೋಲಾ, ನಾಮಫಲಕ,  ಟಿಕೆಟ್ ಕೌಂಟರ್, ಜೋಕಾಲಿ,  ಸುತ್ತಲೂ ಚೈನ್ ಲಿಂಕ್ ಹೊದಿಕೆ, ತಂತಿ ಬೇಲಿ ನಿರ್ಮಿಸಲಾಗಿದೆ. 

ಸಸ್ಯೋದ್ಯಾನಕ್ಕೆ ಭೇಟಿ ನೀಡುವ ಸಾರ್ವಜನಿಕರು, ಪ್ರವಾಸಿಗರಿಂದ ಸಂಗ್ರಹವಾಗುವ ಪ್ರವೇಶ ಶುಲ್ಕದಿಂದ ನಿರ್ವಹಣಾ ವೆಚ್ಚ  ಭರಿಸಲಾಗುವುದು’ ಎಂದು ಅವರು ತಿಳಿಸುತ್ತಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಸ್ಯೋದ್ಯಾನ ಯೋಜನೆಗೆ ಸ್ಥಳವನ್ನು ಆಯ್ಕೆ ಮಾಡಿ ಅಕ್ಟೋಬರ್ ನಲ್ಲಿ ಯೋಜನೆ ಅನುಷ್ಠಾನ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.