ADVERTISEMENT

ಟಿಪ್ಪು ಜಯಂತಿ: ಮೆರವಣಿಗೆಗೆ ಆಸ್ಪದವಿಲ್ಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 7:23 IST
Last Updated 7 ನವೆಂಬರ್ 2017, 7:23 IST

ಹಳಿಯಾಳ: ಟಿಪ್ಪು ಸುಲ್ತಾನ್ ಜಯಂತಿಯನ್ನು ಇದೇ 10ರಂದು ಶಿಷ್ಟಾಚಾರದಂತೆ ಪುರಸಭೆಯ ಸಭಾಭವನದಲ್ಲಿ ಆಚರಿಸಲಾಗುವುದು. ಅಂದು ಯಾವುದೇ ಮೆರವಣಿಗೆ ಸೇರಿದಂತೆ, ಯಾವುದೇ ಕಾರ್ಯಕ್ರಮಗಳಿಗೆ ಆಸ್ಪದವಿಲ್ಲ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು.

ತಹಶೀಲ್ದಾರ ಕಚೇರಿಯಲ್ಲಿ ನಡೆದ ಟಿಪ್ಪು ಸುಲ್ತಾನ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಸುತ್ತೋಲೆಯಂತೆ ಟಿಪ್ಪು ಜಯಂತಿಯನ್ನು ಪುರಸಭೆಯ ಸಭಾಭವನದಲ್ಲಿ ಆಚರಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಕೆಲ ಮುಸ್ಲಿಂ ಮುಖಂಡರು, ‘ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ತಮ್ಮ ಸಮಾಜದವರು ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ, ಮೆರವಣಿಗೆಗೆ ಅನುಮತಿ ಕೇಳಿದರೆ, 144ನೇ ಕಲಂ ಜಾರಿ ಮಾಡಿ ನಿಷೇಧ ಹೇರಲಾಗುತ್ತಿದೆ. ಇಂತಹ ಅನ್ಯಾಯವೇಕೆ’ ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್ಐ ಎಂ.ಎಸ್. ಹೂಗಾರ, ಅವಶ್ಯಕತೆ ಇದ್ದಲ್ಲಿ ಸರ್ಕಾರದ ಸುತ್ತೋಲೆಯಂತೆ 144ನೇ ಕಲಂ ಜಾರಿ ಮಾಡಲಾಗುವುದು. ಯಾವುದೇ ಮೆರವಣಿಗೆ ಮತ್ತಿತರರ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡುವುದನ್ನು ಅಂದು ನಿಷೇಧಿಸಲಾಗಿದೆ ಎಂದರು.

ಆಗ ಪುನಃ ಮುಸ್ಲಿಂ ಮುಖಂಡರು, ನ.10ರ ನಂತರ ನಮಗೆ ಟಿಪ್ಪು ಜಯಂತಿ ಉತ್ಸವದ ಅಂಗವಾಗಿ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಅದ್ಧೂರಿಯಾಗಿ ಆಚರಿಸಲು ಅನುಮತಿ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು. ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಸಿಪಿಐ ಸುಂದರೇಶ ಹೊಳೆನ್ನವರ ಹಾಗೂ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.