ADVERTISEMENT

ತಾತ್ಕಾಲಿಕ ರಸ್ತೆಯಲ್ಲಿ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 6:43 IST
Last Updated 3 ಡಿಸೆಂಬರ್ 2017, 6:43 IST

ಸಿದ್ದಾಪುರ: ಕಳೆದ ವರ್ಷದಂತೆ ಈ ವರ್ಷ ಕೂಡ ತಾಲ್ಲೂಕಿನ ಮಾಣಿಹೊಳೆ ಸೇತುವೆಯ ಸಮೀಪ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆಯ ಮೂಲಕ ಸಾರಿಗೆ ಬಸ್ ಸಂಚಾರ ಶುಕ್ರವಾರ ಆರಂಭಗೊಂಡಿದೆ.

ತಾಲ್ಲೂಕಿನ ಸಿದ್ದಾಪುರ–ಹಾರ್ಸಿಕಟ್ಟಾ–ಗೋಳಿಮಕ್ಕಿ ರಸ್ತೆಯಲ್ಲಿರುವ ಮಾಣಿ ಹೊಳೆ ಸೇತುವೆ ಕೆಲವು ವರ್ಷಗಳ ಹಿಂದೆ ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲ ಆರಂಭವಾದ ನಂತರ ಸಾರಿಗೆ ಸಂಸ್ಥೆಯ ಬಸ್‌ಗಳು ಸಿದ್ದಾಪುರ–ಹಾರ್ಸಿಕಟ್ಟಾ–ಮುಠ್ಠಳ್ಳಿ–ಹಾಲ್ಕಣಿ–ಕೋಡ್ಸರ ಮಾರ್ಗವಾಗಿ ಹಾಗೂ ಶಿರಸಿಗೆ ಹೇರೂರು, ಹೆಗ್ಗರಣಿ ಮಾರ್ಗವಾಗಿ ಸಂಚರಿಸುತ್ತಿದ್ದವು. ಈಗ ಮೊದಲಿನಂತೆ ಪುನಃ ಮಾಣಿ ಹೊಳೆಯ ರಸ್ತೆಯ ಮೂಲಕ ಬಸ್ ಸಂಚಾರ ಆರಂಭವಾಗಿದೆ.

ಅದರೊಂದಿಗೆ ಶಿರಸಿಯಿಂದ ಬೆಳಿಗ್ಗೆ 7.30ಕ್ಕೆ ಹಾಗೂ ಸಂಜೆ 4ಕ್ಕೆ ಕೊಳಗಿಬೀಸ್–ಹೇರೂರು–ಹೆಗ್ಗಾರಬೈಲ್–ಹೆಗ್ಗರಣಿ ಮಾರ್ಗವಾಗಿ ಹುಕ್ಕಳಿಯವರೆಗೆ, ಸಂಜೆ 7ಕ್ಕೆ ಶಿರಸಿಯಿಂದ ಹೆಗ್ಗರಣಿಗೆ ವಸತಿ ಬಸ್ ಸಂಚಾರ ಆರಂಭಗೊಂಡಿದೆ. ಬೆಳಿಗ್ಗೆ 6.30ಕ್ಕೆ ಹೆಗ್ಗರಣಿಯಿಂದ ಹೆಗ್ಗಾರಬೈಲ್ ಮೂಲಕ ಶಿರಸಿಗೆ ನೂತನ ಸಾರಿಗೆ ಬಸ್‌ ಸಂಚಾರವೂ ಆರಂಭಗೊಂಡಿದೆ ಎಂದು ಸಾರಿಗೆ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಈ ಸಾರಿಗೆ ಸೌಲಭ್ಯ ಕಲ್ಪಿಸಿಕೊಟ್ಟಿರುವುದಕ್ಕಾಗಿ ವಾ.ಕ.ರ.ಸಾ ಸಂಸ್ಥೆಯ ನಿರ್ದೇಶಕರಿಗೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ನಾರಾಯಣ ಹೆಗಡೆ ಚಾರೆಕೋಣೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.