ADVERTISEMENT

‘ದೇಶದ ರೈತರ ಬೆನ್ನೆಲುಬು ಮುರಿದಿದೆ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:43 IST
Last Updated 16 ಮೇ 2017, 6:43 IST

ಸಿದ್ದಾಪುರ: ‘ಕೇಂದ್ರ ಸರ್ಕಾರ ಸಹಕಾರಿ ಸಂಘಗಳು ಮೇಲಕ್ಕೆ ಬಾರದಂತೆ ಮಾಡುತ್ತಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್‌.ಎಲ್.ಘೋಟ್ನೇಕರ ಹೇಳಿದರು.
ತಾಲ್ಲೂಕಿನ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘವು ತನ್ನ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ, ಸೋಂದಾದ ಶಬರ ಸಂಸ್ಥೆಯ  ಸಹಯೋಗದಲ್ಲಿ  ನಾಣಿಕಟ್ಟಾ ದಲ್ಲಿ ಸೋಮವಾರ ಏರ್ಪಡಿಸಿದ್ದ ‘ನಮ್ಮೂರ ಹಬ್ಬ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಕ್ಯಾಶ್‌ಲೆಸ್ ವ್ಯವಹಾರ ಎಂದು ಹೇಳುತ್ತಲೇ ರೈತರು ದುಡಿದ ಹಣ ಅವರಿಗೆ ಸಿಗದಿದ್ದರೆ ಹೇಗೆ’ ಎಂದು ಪ್ರಶ್ನೆ ಮಾಡಿದ ಅವರು, ‘ನಾವು (ಕೆಡಿಸಿಸಿ ಬ್ಯಾಂಕ್‌) ರೈತರಿಗೆ ಬೆಳೆ ಸಾಲ ನೀಡು ತ್ತೇವೆ.  ಆದರೆ ಅದನ್ನು ಪಡೆಯಲು ರೈತರು ಬ್ಯಾಂಕ್‌ಗಳಿಗೆ ಚಪ್ಪಲಿ ಸವೆಸ ಬೇಕಾಗುತ್ತದೆ.

ಆ  ಹಣಕ್ಕಾಗಿ ಅವರು ಸರದಿ ಸಾಲಿನಲ್ಲಿ ಕಾಯಬೇಕಾಗುತ್ತದೆ. ರೈತರ ಬಗ್ಗೆ ಬಹಳ ಭಾಷಣ ಮಾಡು ತ್ತೇವೆ. ರೈತ ದೇಶದ ಬೆನ್ನಲುಬು ಎನ್ನುತ್ತೇವೆ. ಆದರೆ ರೈತರ ಬೆನ್ನಲುಬು ಮುರಿದಿದೆ’ ಎಂದರು.

ADVERTISEMENT

‘ಅಡಿಕೆ ಬೆಳೆಗೆ ಶೇ 5ರಷ್ಟು ವಿಮೆ ಕಡ್ಡಾಯ ಮಾಡಿದ್ದಾರೆ. ಕೊಳೆರೋಗ ಬಂದರೆ ಬೆಳೆವಿಮೆ ಸಿಗುವುದಿಲ್ಲ. ಈ ಬೆಳೆವಿಮೆ ಅವೈಜ್ಞಾನಿಕವಾಗಿದೆ.ಕೇಂದ್ರ ಸರ್ಕಾರ ರೈತರ ಕುರಿತು ವಸ್ತು ಸ್ಥಿತಿಯ ಅಧ್ಯಯನ ಮಾಡಬೇಕು’ ಎಂದರು.

‘ಕಳೆದ ಮೂರು ವರ್ಷಗಳಿಂದ ನಮ್ಮಲ್ಲಿ ಬರಗಾಲ ಇದೆ. ರೈತರ ಕಷ್ಟವನ್ನು ನೋಡುವವರು ಯಾರು. ಸೇವಾ ಸಹಕಾರಿ ಸಂಘಗಳು ಮತ್ತು ಕೆಡಿಸಿಸಿ ಬ್ಯಾಂಕ್ ರೈತರ ಕಷ್ಟದತ್ತ ನೋಡುತ್ತಿವೆ’  ಎಂದರು.

ಅಧ್ಯಕ್ಷತೆ ವಹಿಸಿದ್ದ ತ್ಯಾಗಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್‌.ಬಿ.ಹೆಗಡೆ ಮತ್ತೀಹಳ್ಳಿ ಮಾತನಾಡಿದರು. ಕೆಡಿಸಿಸಿ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಎಸ್‌.ಪಿ.ಬಾಂದುರ್ಗಿ ಇದ್ದರು.

ಸನ್ಮಾನ : ದ್ವಿತೀಯ ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಿನ್ನೆಲೆಯಲ್ಲಿ ಸ್ವಾತಿ ಲಕ್ಷ್ಮೀನಾರಾಯಣ ಹೆಗಡೆ, ಭಾಗ್ಯಶ್ರೀ ನರಸಿಂಹ ಹೆಗಡೆ, ಅದಿತಿ ಶಾಂತಾರಾಮ ಹೆಗಡೆ, ಸುಮಿತ್ ರಾಮಕೃಷ್ಣ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಭಾಗ್ಯಶ್ರೀ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.

ರಾಜೇಂದ್ರ ಭಟ್ಟ ವೇದಘೋಷ ಮಾಡಿದರು.ಶ್ರುತಿ ಭಟ್ಟ ಶೇಲೂರು ಸ್ವಾಗತ ಗೀತೆ ಹಾಡಿದರು. ಶಬರ ಸಂಸ್ಥೆಯ ನಾಗರಾಜ ಜೋಷಿ ಸ್ವಾಗತಿಸಿದರು.ವಿ.ಎಂ.ಹೆಗಡೆ ತ್ಯಾಗಲಿ ಮತ್ತು ಪ್ರಜ್ಞಾ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.