ADVERTISEMENT

ಬರಪರಿಹಾರ: ₹ 5.70 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 5:00 IST
Last Updated 21 ಫೆಬ್ರುವರಿ 2017, 5:00 IST
ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿದರು. ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಇದ್ದಾರೆ
ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿದರು. ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ಇದ್ದಾರೆ   
ಕಾರವಾರ: ಜಿಲ್ಲೆಯ 7 ತಾಲ್ಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ಎಂದು ಘೋಷಿಸಿದ್ದು, ಬರಪರಿಹಾರ ಕಾಮಗಾರಿ ಗಳಿಗಾಗಿ ಇನ್ನೂ ₹ 5.70 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
 
ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಬರಪರಿಹಾರ ಕಾಮಗಾರಿಗಳು ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು.
 
ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಆರಂಭ ವಾಗಿದೆ. ಈ ಬಾರಿ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದ್ದು, ಇದನ್ನು ಎದುರಿಸಲು ಸರ್ವಸಿದ್ಧತೆ ಮಾಡಲಾಗಿದೆ. ಹಳಿಯಾಳ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ಭಟ್ಕಳ, ಹೊನ್ನಾವರ ಮತ್ತು ಜೊಯಿಡಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದರು. 
 
ಅನುದಾನ ಬಿಡುಗಡೆ: ಬರಪರಿಹಾರ ಕಾಮಗಾರಿಗಳಿಗೆ ಅನುದಾನದ ಕೊರತೆ ಯಿಲ್ಲ. ಪ್ರತಿ ತಹಶೀಲ್ದಾರ್ ಬಳಿ ತುರ್ತು ಕಾಮಗಾರಿಗಳಿಗೆ ₹ 20ರಿಂದ ₹  30ಲಕ್ಷ ಬಿಡುಗಡೆ ಮಾಡಲಾಗಿದೆ. ಬರಪೀಡಿತ ತಾಲ್ಲೂಕುಗಳಿಗೆ ತಲಾ ₹  60 ಲಕ್ಷ ಬಿಡು ಗಡೆ ಮಾಡಲಾಗಿದ್ದು, ಇನ್ನುಳಿದ ತಾಲ್ಲೂಕುಗಳಿಗೆ ಕುಡಿಯುವ ನೀರು, ಮೇವು ಪೂರೈಕೆ ಇತ್ಯಾದಿಗಳಿಗೆ ₹  40 ಲಕ್ಷ ಬಿಡುಗಡೆ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಜಿಲ್ಲಾಧಿಕಾರಿ ಖಾತೆಗೆ ಕುಡಿಯುವ ನೀರಿನ ಕಾಮಗಾರಿ ಗಳಿಗೆ ₹  1.60 ಕೋಟಿ, ಮೇವು ಪೂರೈ ಕೆಗೆ ₹ 80 ಲಕ್ಷ ಸೇರಿದಂತೆ ₹  3.60 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು. 
 
ಕುಡಿಯುವ ನೀರಿನ ಕಾಮಗಾರಿ ಗಳಿಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ₹  3.20 ಕೋಟಿ ಪ್ರಸ್ತಾವನೆ ಸ್ವೀಕರಿಸ ಲಾಗಿದೆ. ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು, 8,086 ಮೇವಿನ ಕಿಟ್ ಪೂರೈಕೆ ಮಾಡಲಾಗಿದೆ ಎಂದು ಹೇಳಿದರು.
 
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಮಂಕಾಳು ವೈದ್ಯ, ಶಾರದಾ ಶೆಟ್ಟಿ, ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ವಿನಾಯಕ ಪಾಟೀಲ್ ಉಪಸ್ಥಿತರಿದ್ದರು.
 
ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ:  ಬರಪರಿಹಾರ ಕಾಮಗಾರಿಗಳಲ್ಲಿ ನಿರ್ಲಕ್ಷ್ಯ ವಹಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು. ಎಲ್ಲ ಹಂತದ ಅಧಿಕಾರಿಗಳು ಗ್ರಾಮಗಳಿಗೆ ನಿರಂತರ ಭೇಟಿ ನೀಡಿ ಕುಡಿಯುವ ನೀರು ಹಾಗೂ ಮೇವಿನ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸ ಬೇಕು. ಎಲ್ಲ ಪ್ರಮುಖ ಕಚೇರಿಗಳಲ್ಲಿ ಸ್ಪಂದನ ಕೋಶಗಳನ್ನು ತೆರೆಯಬೇಕು. ಕುಡಿಯುವ ನೀರಿನ ಬಗ್ಗೆ ಜನರಿಂದ ಅಹವಾಲು ಬಂದ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದರು.
 
ರಸ್ತೆಗಳಿಗೆ ಪಂಪನ ಹೆಸರು!: ಇತ್ತೀಚೆಗೆ ಮುಕ್ತಾಯವಾದ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ನಾಡಿನ ಹಿರಿಯ ಕವಿ ಬಿ.ಎ.ಸನದಿ ಅವರು ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಪಂಪ ಮಹಾಕವಿ ಹೆಸರು ಇಡಲು ಮನವಿ ಮಾಡಿದ್ದಾರೆ. ಈ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು. ಶಿರಸಿ–-ಬನವಾಸಿ ರಸ್ತೆಗೆ ಪಂಪ ಮಹಾಕವಿ ಹೆಸರು ಇಡಲು ಈಗಾಗಲೇ ಉತ್ಸವದಲ್ಲಿ ಘೋಷಣೆ ಮಾಡಲಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ದೇಶಪಾಂಡೆ ಅವರು ಸುದ್ದಿಗಾರರಿಗೆ ತಿಳಿಸಿದರು. 
 
ಗ್ರಾಮ ಪಂಚಾಯ್ತಿಗಳಲ್ಲಿ ಕ್ರೀಡಾಂಗಣ: ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಗಳಲ್ಲಿ ಲಭ್ಯವಿರುವ ಜಮೀನು ಗುರು ತಿಸಲು ಜಿಲ್ಲಾಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಒಳ ಗೊಂಡ ಸಮಿತಿ ರಚಿಸಲಾಗುವುದು. ಈ ಸಮಿತಿಯು 15 ದಿನಗಳ ಒಳಗಾಗಿ ಕ್ರೀಡಾಂಗಣ ನಿರ್ಮಾಣ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿ, ಮುಂದಿನ 3 ತಿಂಗಳ ಒಳಗಾಗಿ ಕಾಮಗಾರಿ ಆರಂಭವಾಗಬೇಕು ಎಂದು ಹೇಳಿದರು.
 
***
ಅಂಗನವಾಡಿಗಳಿಗೆ ಬಿಸ್ಕತ್‌
 ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಅಂಗನವಾಡಿಗಳಲ್ಲಿ 43 ಸಾವಿರ ಮಕ್ಕಳಿದ್ದು, ಅವರಿಗೆ ವಾರಕ್ಕೊಮ್ಮೆ ಪ್ರೊಟೀನ್‌ಯುಕ್ತ ಬಿಸ್ಕತ್‌ ಪಾಕೇಟ್ ಒದಗಿಸಲು ಬ್ರಿಟಾನಿಯಾ ಕಂಪೆನಿ ಒಪ್ಪಿಕೊಂಡಿದೆ. ಏಪ್ರಿಲ್ ತಿಂಗಳಿನಿಂದ ಕಂಪೆನಿಯು ಬಿಸ್ಕತ್‌ ಒದಗಿಸಲಿದೆ. ಇದೇ ರೀತಿ ಎಲ್ಲ ಅಂಗನವಾಡಿಗಳಿಗೆ ಆಟಿಕೆ ಸಾಮಗ್ರಿಗಳನ್ನು ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
 
**
ಕುಡಿಯುವ ನೀರಿನ ತುರ್ತು ಕಾರ್ಯಗಳಿಗಾಗಿ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ತಲಾ ₹ 1.50 ಲಕ್ಷ ಬಿಡುಗಡೆ ಮಾಡಲಾಗಿದೆ
ಆರ್‌.ವಿ.ದೇಶಪಾಂಡೆ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.