ADVERTISEMENT

ಬಿಡಾಡಿ ದನಗಳ ಹಾವಳಿ ಹೆಚ್ಚಳ

ಪಿ.ಕೆ.ರವಿಕುಮಾರ
Published 11 ಸೆಪ್ಟೆಂಬರ್ 2017, 5:38 IST
Last Updated 11 ಸೆಪ್ಟೆಂಬರ್ 2017, 5:38 IST
ಕಾರವಾರದ ಸುಭಾಷ್‌ ವೃತ್ತದಲ್ಲಿ ದನ ಅಡ್ಡ ಬಂದ ಕಾರಣ ಮುಂದೆ ಸಾಗಲು ಹರಸಾಹಸ ಪಡುತ್ತಿರುವ ಬೈಕ್‌ ಸವಾರ
ಕಾರವಾರದ ಸುಭಾಷ್‌ ವೃತ್ತದಲ್ಲಿ ದನ ಅಡ್ಡ ಬಂದ ಕಾರಣ ಮುಂದೆ ಸಾಗಲು ಹರಸಾಹಸ ಪಡುತ್ತಿರುವ ಬೈಕ್‌ ಸವಾರ   

ಕಾರವಾರ: ನಗರದಲ್ಲಿ ದಿನೇ ದಿನೇ ಬಿಡಾಡಿ ದನಕರುಗಳ ಹಾವಳಿ ಹೆಚ್ಚಾಗುತ್ತಿದೆ. ಇವುಗಳು ಹೆದ್ದಾರಿ, ಪ್ರಮುಖ ರಸ್ತೆಗಳಲ್ಲಿ ಅಡ್ಡಲಾಗಿ ನಿಲ್ಲುವುದರಿಂದ ವಾಹನ ಸವಾರರು ತುಂಬಾ ಕಿರಿಕಿರಿ ಅನುಭವಿಸುತ್ತಿದ್ದಾರೆ. ಅಲ್ಲದೇ ಪಾದಚಾರಿಗಳಲ್ಲೂ ಜೀವಭಯ ಎದುರಾಗಿದೆ.

ಇಲ್ಲಿನ ಜನತಾ ಬಜಾರ್‌ ರಸ್ತೆ, ಕೋಡಿಬಾಗ ರಸ್ತೆ, ಸುಭಾಷ್‌ ವೃತ್ತ, ಗ್ರೀನ್‌ ಸ್ಟ್ರೀಟ್‌, ಹೂವಿನ ಚೌಕ, ಪಿಕಳೆ ರಸ್ತೆ, ಕಮಲಾಕರ ರಸ್ತೆ ಹಾಗೂ ಕೋರ್ಟ್‌ ರಸ್ತೆಯು ಸದಾ ಜನಸಂದಣಿಯಿಂದ ಕೂಡಿರುತ್ತದೆ. ಈ ಭಾಗಗಳಲ್ಲಿ ದನಕರುಗಳು ಹಿಂಡು ಹಿಂಡಾಗಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ ಹಾಗೂ ಅವು ಒಮ್ಮೊಮ್ಮೆ ರಸ್ತೆಗೆ ಅಡ್ಡಲಾಗಿ ಠಿಕಾಣಿ ಹೂಡುತ್ತವೆ. ಇದರಿಂದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಸವಾರರಿಗೆ ದೊಡ್ಡ ಸವಾಲಾಗಿದೆ.

‘ಕೆಲ ದಿನಗಳ ಹಿಂದೆ ಗ್ರೀನ್‌ಸ್ಟ್ರೀಟ್‌ ರಸ್ತೆಯಲ್ಲಿ ದನಗಳ ಹಿಂಡು ನುಗ್ಗಿದ್ದರಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದರು. ಅಲ್ಲದೇ ಅವರ ಜತೆಗಿದ್ದ ಐದು ವರ್ಷದ ಬಾಲಕ ಸಹ ಬಿದ್ದ ಗಾಯಗೊಂಡನು. ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಆದರೆ ನಗರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಕೋಡಿಬೀರ ನಿವಾಸಿ ಸಯ್ಯದ್‌ ಅಶ್ರಫ್‌ ಖಾದ್ರಿ.

ADVERTISEMENT

ಸಂತೆಯಲ್ಲೂ ಉಪಟಳ:  ‘ಪ್ರತಿ ಭಾನುವಾರ ನಗರದ ಹೃದಯಭಾಗ­ದಲ್ಲಿ ಬೃಹತ್‌ ಸಂತೆ ನಡೆಯುತ್ತದೆ. ಹಣ್ಣ, ತರಕಾರಿಗಳ ಬಾಯಿ ಹಾಕಲು ದನಕರುಗಳು ಮುಗಿಬೀಳುತ್ತಿದ್ದು, ಅವುಗಳನ್ನು ಅಟ್ಟಲು ವ್ಯಾಪಾರಸ್ಥರು ಹರಸಾಹಸ ಪಡಬೇಕಾಗಿದೆ. ಹಲವು ಬಾರಿ ವ್ಯಾಪಾರಕ್ಕೆ ತಂದ ಸೊಪ್ಪು, ತರಕಾರಿಯನ್ನು ಗುಳುಂ ಮಾಡಿದ ನಿದರ್ಶನಗಳು ಬಹಳಷ್ಟಿದೆ. ಇನ್ನು ಕಡಲತೀರದಲ್ಲೂ ಗೂಳಿಗಳು ಒಮ್ಮೊಮ್ಮೆ ಕದನಕ್ಕೆ ಇಳಿದುಬಿಡುತ್ತವೆ. ಇದರಿಂದ ತೀರಕ್ಕೆ ಬಂದ ವಾಯು­ವಿಹಾರಿಗಳು ಹಾಗೂ ಪ್ರವಾಸಿಗರು ಆತಂಕ ಪಡುವಂತಾಗಿದೆ’ ಎನ್ನುತ್ತಾರೆ ಅವರು. 

ನಿಷ್ಪ್ರಯೋಜಕವಾದ ಕೊಂಡವಾಡ: ‘ಬಿಡಾಡಿ ದನಕರುಗಳ ಆಶ್ರಯಕ್ಕಾಗಿ ಎರಡ್ಮೂರು ವರ್ಷಗಳ ಹಿಂದೆ ನಗರದ ಆಫೀಸರ್ಸ್‌ ಕ್ಲಬ್‌ ಬಳಿಯ ನಗರಸಭೆ ಜಾಗದಲ್ಲಿ ₹ 3.50 ಲಕ್ಷ ವೆಚ್ಚದಲ್ಲಿ ಕೊಂಡವಾಡ ನಿರ್ಮಾಣ ಮಾಡ­ಲಾಗಿತ್ತು. ಅಲ್ಲಿ ಕಂಪೌಂಡ್‌, ಶೆಲ್ಟರ್‌, ನೀರಿನ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು. ಆದರೆ ಅಧಿಕಾರಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಅದು ನಿಷ್ಪ್ರಯೋಜಕ­ವಾಗಿದೆ. ಹೀಗಾಗಿ ಅದನ್ನು ಇನ್ನೊಮ್ಮೆ ವ್ಯವಸ್ಥಿತವಾಗಿ ತೆರೆಯಬೇಕು. ಬಿಡಾಡಿ ದನಕರುಗಳನ್ನು ಹಿಡಿದು ಅಲ್ಲಿ ಆಶ್ರಯ ಕಲ್ಪಿಸಬೇಕು’ ಎಂದು ನಗರಸಭೆ ಸದಸ್ಯ ಸಂತೋಷ ನಾಯ್ಕ ಒತ್ತಾಯಿಸಿದರು.

* * 

ಬಿಡಾಡಿ ದನಗಳ ರಕ್ಷಣೆಗೆ ಪ್ರಾಣಿ ದಯಾ ಸಂಘದವರು ಧ್ವನಿ ಎತ್ತಬೇಕು. ಅವುಗಳನ್ನು ನಿಯಂತ್ರಿಸಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಸಂತೋಷ ನಾಯ್ಕ ಗುರುಮಠ,
ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.