ADVERTISEMENT

ಬಿಸಿಲ ಝಳ: ಈಜುಕೊಳಕ್ಕೆ ಯುವಕರ ದಂಡು

ಪಿ.ಕೆ.ರವಿಕುಮಾರ
Published 24 ಏಪ್ರಿಲ್ 2017, 6:15 IST
Last Updated 24 ಏಪ್ರಿಲ್ 2017, 6:15 IST
ಕಾರವಾರದ ಮಹಾತ್ಮಗಾಂಧಿ ರಸ್ತೆಯಲ್ಲಿನ ನಗರಸಭೆಯ ಈಜುಕೊಳದಲ್ಲಿ ಮಿಂದೆದ್ದ ಯುವಕರು
ಕಾರವಾರದ ಮಹಾತ್ಮಗಾಂಧಿ ರಸ್ತೆಯಲ್ಲಿನ ನಗರಸಭೆಯ ಈಜುಕೊಳದಲ್ಲಿ ಮಿಂದೆದ್ದ ಯುವಕರು   

ಕಾರವಾರ: ಇಲ್ಲಿನ ಮಹಾತ್ಮಗಾಂಧಿ ರಸ್ತೆಯಲ್ಲಿರುವ ನಗರಸಭೆಯ ಈಜುಕೊಳದಲ್ಲಿ ಹೆಚ್ಚಾಗಿ ಯುವಕರ ದಂಡು ಕಂಡುಬರುತ್ತಿದೆ. ಬಿಸಿಲ ಝಳವನ್ನು ತಾಳಲಾರದ ಅನೇಕ ಮಂದಿ ತಂಪು ಅನುಭವ ಪಡೆಯಲು ಈ ನೀರಿನ ಕೊಳಕ್ಕೆ ಮೈಯೊಡ್ಡಿದ್ದಾರೆ.ಸುಮಾರು ಎರಡು ವರ್ಷಗಳಿಂದ ಬಾಗಿಲು ಮುಚ್ಚಿದ ಈಜುಕೊಳ ಕಳೆದ ಮಾರ್ಚ್‌ 15ರಿಂದ ಪುನರಾರಂಭಗೊಂಡಿದೆ. ಇದು ಈಜುಪ್ರಿಯರ ಮೊಗದಲ್ಲಿ ನಗು ಅರಳಿಸಿದೆ. ಕರಾವಳಿಯಲ್ಲಿ ದಿನೇ ದಿನೇ ತಾಪಮಾನ ಏರುತ್ತಿದೆ. ಗರಿಷ್ಠ 35ರಿಂದ 38 ಡಿಗ್ರಿ ಸೆಲ್ಸಿಯಸ್‌ ಇದೆ.

ಆರ್ದ್ರತೆ ಕೂಡ ಇರುವುದರಿಂದ ಸೆಖೆ ಅನುಭವ ಹೆಚ್ಚಾಗಿದೆ. ಈ ಬಿಸಿಲ ಝಳದಿಂದ ಪಾರಾಗಲು ಜನತೆ ನಾನಾ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ. ಬಾಯಾರಿಕೆ ನೀಗಿಸಿಕೊಳ್ಳಲು ಕೆಲವರು ತಂಪು ಪಾನೀಯಗಳ ಮೊರೆ ಹೋದರೆ, ದೇಹವನ್ನು ತಂಪಾಗಿಡಲು ಕೆಲವರು ಈಜುಕೊಳದತ್ತ ಮುಖ ಮಾಡಿದ್ದಾರೆ. ನೀಲಿಯಂತೆ ಕಾಣುವ ನೀರಿನ ಕೊಳದಲ್ಲಿ ಯುವಕರು ಧುಮುಕಿ, ಮೀನಿನಂತೆ ಈಜುತ್ತಾ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ.

ನಿರ್ವಹಣೆ ಬಲು ದುಬಾರಿ:
ಈಜುಕೊಳದ ನಿರ್ವಹಣಾ ಜವಾಬ್ದಾರಿಯನ್ನು ಕೀರ್ತಿ ಸ್ವಿಮ್ಮಿಂಗ್‌ ಅಕಾಡೆಮಿ ವಹಿಸಿಕೊಂಡಿದ್ದು, ಛತ್ರಪತಿ ನಾಯ್ಕ ಅವರು ವಾರ್ಷಿಕ ₹ 1.50 ಲಕ್ಷ ಗುತ್ತಿಗೆ ಪಡೆದಿದ್ದಾರೆ. 4 ಮಂದಿ ನುರಿತ ಈಜು ತಜ್ಞರು, 3 ಮಂದಿ ಜೀವರಕ್ಷಕರು ಸೇರಿ ಒಟ್ಟು 7 ಮಂದಿ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ. ಪುರುಷರಿಗೆ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ಹಾಗೂ ಮಧ್ಯಾಹ್ನ 12.30ರಿಂದ ಮಧ್ಯಾಹ್ನ 3.30ರವರೆಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್‌ ಇದ್ದು, ಮಧ್ಯಾಹ್ನ 3.30ರಿಂದ ಸಂಜೆ 4.30ರವರೆಗೆ ಈಜು ಕಲಿಯಬಹುದು.

ADVERTISEMENT

‘ಈಜುಕೊಳ ನಡೆಸಲು ತಿಂಗಳಿಗೆ ₹ 80,000 ಖರ್ಚು ಬೀಳುತ್ತಿದೆ. ಜೀವರಕ್ಷಕ, ಕಾವಲುಗಾರ ಹಾಗೂ ಶುಲ್ಕ ವಸೂಲಿ ಮಾಡುವ ಸಿಬ್ಬಂದಿ ಸೇರಿ ಒಟ್ಟು 10 ಮಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಸಂಬಳ ಹಾಗೂ ವಿದ್ಯುತ್‌ ಬಿಲ್‌ ಭರಿಸುವುದು ಅಸಾಧ್ಯವಾಗಿದೆ. ನಿತ್ಯ 100ರಿಂದ 150 ಮಂದಿ ಬಂದರೆ ಮಾತ್ರ ನಿರೀಕ್ಷಿತ ಆದಾಯ ಕಾಣಲು ಸಾಧ್ಯ’ ಎನ್ನುತ್ತಾರೆ ಈಜುಕೊಳದ ಮೇಲ್ವಿಚಾರಕ ಪ್ರಶಾಂತ್‌ ಬಿಣಗಿ.

‘ನಿರ್ವಹಣೆ ಇಲ್ಲದೇ ಸೊರಗಿದ ಈಜುಕೊಳವನ್ನು ನಗರಸಭೆ ಕೆಲ ತಿಂಗಳ ಹಿಂದೆಯಷ್ಟೇ ₹ 9.90 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿದೆ. ಇಲ್ಲಿ ಮಕ್ಕಳಿಗೆ ಹಾಗೂ ಸ್ವಲ್ಪ ದೊಡ್ಡವರಿಗೆ ಪ್ರತ್ಯೇಕ ಕೊಳಗಳಿದ್ದು, ಉತ್ತಮವಾಗಿದೆ. ಬಿಸಿಲು ನೆತ್ತಿಸುಡುತ್ತಿದ್ದು, ದೇಹವನ್ನು ತಂಪಾಗಿಡುವ ಅನಿವಾರ್ಯತೆ ಇದೆ. ಹೀಗಾಗಿ ನಿತ್ಯ ಈಜುಕೊಳಕ್ಕೆ ಬರುತ್ತಿದ್ದೇನೆ. ನೀರಿನಲ್ಲಿ ಆಡುತ್ತಿದ್ದರೆ ಸಮಯ ಕಳೆಯುವುದೇ ಗೊತ್ತಾವುದಿಲ್ಲ’ ಎಂದು ಸೂರಜ್‌ ರೇವಣಕರ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.