ADVERTISEMENT

ಭಟ್ಕಳ ತಾಲ್ಲೂಕಿನ ಪ್ರಥಮ ಹಬ್ಬ ಮಾರಿಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 8:44 IST
Last Updated 19 ಜುಲೈ 2017, 8:44 IST

ಭಟ್ಕಳ: ಸರ್ವರನ್ನೂ ಹರಸುವ, ರೋಗ ರುಜಿನಗಳಿಂದ ಗ್ರಾಮವನ್ನು ರಕ್ಷಿಸುವ, ಸುರಿಯುವ ಮಳೆಯ ನಡುವೆಯೇ ನಡೆಯುವ ತಾಲ್ಲೂಕಿನ ಪ್ರಥಮ ಹಬ್ಬ ಮಾರಿಜಾತ್ರೆಯು ಜುಲೈ 19, 20ರಂದು ಎರಡು ದಿನ ವಿಜೃಂಭಣೆಯಿಂದ ನಡೆಯಲಿದೆ.

ಆಷಾಢ ಮಾಸದ ಹುಣ್ಣಿಮೆ ನಂತರ ಬರುವ ಪ್ರಥಮ ಮಂಗಳವಾರದಂದು ಆಮಟೆ ಮರವೊಂದನ್ನು ಗುರುತಿಸಿ, ಪೂಜೆ ಸಲ್ಲಿಸಿ ಕಡಿಯಲಾಗುತ್ತದೆ. ನಂತರ ದೇವಸ್ಥಾನದ ಧರ್ಮದರ್ಶಿಗಳ ಸೂಚನೆಯಂತೆ ಮಾರಿಯ ಗಂಡನಾಗುವ ಕೊರಗ ಸಮಾಜದ ’ಚಿಕ್ಕ’ ಎಂಬುವನು ಮಣಕುಳಿಯಲ್ಲಿ ವಿಶ್ವಕರ್ಮ ಸಮಾಜದ ಕುಟುಂಬದವರು ತಯಾರಿಸುವ ಮಾರಿಯ ದೇಹ, ಕೈಕಾಲುಗಳ ಭಾಗಗಳನ್ನು ಹೊತ್ತುಕೊಂಡು ಆಚಾರ್ಯರ ಕುಟುಂಬಕ್ಕೆ ತಂದೊಪ್ಪಿಸುತ್ತಾನೆ.

ಬಳಿಕ ಮಾರಿ ಮೂರ್ತಿಯ ಕೆತ್ತನೆ ಕಾರ್ಯ ಆರಂಭವಾಗುತ್ತದೆ. ಜಾತ್ರೆಯ ಹಿಂದಿನ ದಿನ ಸಿದ್ಧಗೊಂಡ ಮಾರಿಯಮ್ಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ರಾತ್ರಿ ಅನ್ನಸಂತರ್ಪಣೆ ನಡೆಸಿ, ಜಾತ್ರೆಯ ದಿನ ನಸುಕಿನ ವೇಳೆಗೆ ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನಕ್ಕೆ ತಂದು ಒಪ್ಪಿಸಿದ ಬಳಿಕ ಮಾರಿಯಮ್ಮನ ಪ್ರತಿಷ್ಠೆ ಆಗುತ್ತದೆ. ಅಂದಿನಿಂದ ಎರಡು ದಿನ ಪರ್ಯಂತ ಮಾರಿಕಾಂಬೆ ಸರ್ವರಿಂದ ಪೂಜೆಗೊಳ್ಳುತ್ತಾಳೆ.

ADVERTISEMENT

‘ಮೊದಲನೇ ದಿನ ಪಟ್ಟಣದವರು, ಎರಡನೇ ದಿನ ಗ್ರಾಮೀಣ ಪ್ರದೇಶದವರು ಹಬ್ಬ ಆಚರಿಸುವುದು ವಾಡಿಕೆ. ಈ ಹಿಂದೆ ಕುರಿ, ಕೋಳಿ ಬಲಿ ನೀಡಲಾಗುತ್ತಿತ್ತು. ಆದರೆ, ಈಗ ಪ್ರಾಣಿಬಲಿ ನಿಷೇಧವಿರುವುದರಿಂದ, ಹರಕೆ ಹೊತ್ತವರು ಮಾರಿಗೆ ಬೆಳ್ಳಿಯ ಕಣ್ಣು, ಹೂವಿನ ಟೋಪಿ, ಸೀರೆ ಉಡಿಸುವುದು, ಹೂವಿನ ಪೂಜೆಯನ್ನು ಸಲ್ಲಿಸುತ್ತಾರೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳುತ್ತಾರೆ.

‘ಎರಡನೇ ದಿನ ಸಂಜೆ ಮಾರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಸುಮಾರು 7 ಕಿ.ಮೀ ದೂರವಿರುವ ಜಾಲಿಕೋಡಿ ಸಮುದ್ರ ತೀರದಲ್ಲಿ ಮಾರಿಯ ಕೈಕಾಲುಗಳನ್ನು ಬೇರ್ಪಡಿಸಿ, ಪೂಜಿಸಿ ವಿಸರ್ಜಿಸಲಾಗುತ್ತದೆ. ಆಧುನಿಕತೆಯಲ್ಲೂ ಸಂಪ್ರದಾಯಬದ್ಧವಾಗಿ ಇಂದಿಗೂ ಮಾರಿಜಾತ್ರೆಯನ್ನು ನಡೆಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷವಾಗಿದೆ’ ಎಂದು ದೇವಸ್ಥಾನ ಟ್ರಸ್ಟಿಯಾದ ಶ್ರೀಧರ ನಾಯ್ಕ ಹೇಳುತ್ತಾರೆ.

ದಂತ ಕಥೆ:  ಭಟ್ಕಳದ ಮಾರಿಯ ಬಗ್ಗೆ ಪ್ರಚಲಿತ ಇರುವ ಇತಿಹಾಸವನ್ನು ನೋಡಿದರೆ, ಇದು ಬೇರೆಡೆಗಿಂಥ ಭಿನ್ನವಾಗಿದೆ. ಮರದ ಕೆಲಸ ಮಾಡುವ ವಿಶ್ವಕರ್ಮ ಕುಟುಂಬದವರು ಬ್ರಾಹ್ಮಣರ ಕುಟುಂಬದ ಅನಾಥ ಬಾಲಕಿಯೊಬ್ಬಳನ್ನು ಸಾಕುತ್ತಿರುತ್ತಾರೆ.

ಈಕೆಗೆ ಮನೆಯ ಮುಂದೆ ಓಡಾಡುತ್ತಿದ್ದ ಹುಡುಗನೊಬ್ಬನ ಪರಿಚಯವಾಗಿ ಆತನಲ್ಲಿ ಅನುರಕ್ತಳಾಗಿ ಮದುವೆಯಾಗುವುದಾಗಿ ಹಠ ಹಿಡಿದಾಗ ವಿಶ್ವಕರ್ಮ ಕುಟುಂಬದವರು ಹುಡುಗನನ್ನು ಕರೆಸಿ ಜಾತಿ, ಕುಲ ಗೋತ್ರ ವಿಚಾರಿಸಿದಾಗ ಆತ ತಾನು ಬ್ರಾಹ್ಮಣನೆಂದು ಹೇಳುತ್ತಾನೆ. ಇಬ್ಬರ ಜಾತಿ ಒಂದೇ ಎಂದು ಮದುವೆ ಮಾಡಿಕೊಡುತ್ತಾರೆ.

ಮದುವೆ ಆದ ಬಳಿಕ ಗಂಡನ ಮನೆಯಲ್ಲಿದ್ದ ಒಂದು ಕೋಣೆಗೆ ಯಾವಾಗಲೂ ಬೀಗ ಹಾಕಿದ್ದನ್ನು ಕಂಡು, ಗಂಡ ಇಲ್ಲದ ವೇಳೆ ಅದನ್ನು ತೆರೆದು ನೋಡಿದಾಗ ಅಲ್ಲಿ ಪ್ರಾಣಿಯೊಂದರ ಚರ್ಮ ಕಾಣುತ್ತದೆ. ಇದರಿಂದ ಅನುಮಾನಗೊಂಡು ಗಂಡನನ್ನು ಪ್ರಶ್ನಿಸಿದಾಗ ತಾನು ಕೊರಗರವನು ಎಂದು ಹೇಳುತ್ತಾನೆ. ಸುಳ್ಳು ಹೇಳಿ ಮದುವೆ ಆಗಿದ್ದಕ್ಕೆ ನೊಂದು ತಕ್ಷಣ ಗಂಡನ ಮನೆ ಬಿಟ್ಟು ತನ್ನ ಸಾಕು ತಂದೆಯ ಮನೆಗೆ ಬಂದು, ನಾಯಿ ಮುಟ್ಟಿದ ಮಡಕೆ ಹೇಗೆ ಶುದ್ಧ ಮಾಡಿಕೊಳ್ಳಬಹುದು ಎಂದು ಕೇಳುತ್ತಾಳೆ.

ಅದಕ್ಕೆ ಆತ, ಮಡಕೆಯನ್ನು ಸುಟ್ಟು ಅದಕ್ಕೆ ಪಂಚಗವ್ಯ ಹಾಕಿದರೆ ಶುದ್ಧವಾಗುತ್ತದೆ ಎಂದಾಗ, ತಕ್ಷಣ ಕೋಣೆಗೆ ಹೋಗಿ ಬೆಂಕಿ ಹಚ್ಚಿಕೊಳ್ಳುತ್ತಾಳೆ. ಬೆಂಕಿಯ ಧಗೆ ತಾಳಲಾರದೇ ಹೊರಗೇ ಓಡಿ ಬಂದು ಭಟ್ಕಳ ತಾಲ್ಲೂಕಿನ ’ಮುಸ್ಲಿಬಾಜಾಲಿ’ ಎಂಬಲ್ಲಿ ಸಮುದ್ರಕ್ಕೆ ಹಾರಿ ಪ್ರಾಣ ಬಿಡುತ್ತಾಳೆ. ಇಂದಿಗೂ ಆ ಸ್ಥಳವನ್ನು (ಇಂದು ಮಾರಿ ವಿಸರ್ಜಿಸುವ ಸ್ಥಳ) ಮಾರಿಗುಂಡಿ ಎಂದು ಕರೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.