ADVERTISEMENT

ವರ್ಗಾವಣೆಗೊಂಡರೂ ಮುಖ್ಯ ಶಿಕ್ಷಕಿಗೆ ಸಿಗದ ಬಿಡುಗಡೆ: ತರಾಟೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 8:45 IST
Last Updated 8 ನವೆಂಬರ್ 2017, 8:45 IST

ಕುಮಟಾ: ವರ್ಗಾವಣೆಗೊಂಡ ತಾಲ್ಲೂಕಿನ ಅಳವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾ ಭಟ್ಟ ಅವರ ಬಿಡುಗಡೆ ಮಾಡದ ಶಿಕ್ಷಣ ಇಲಾಖೆಯನ್ನು, ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ಬಾಲಕೃಷ್ಣ ನಾಯ್ಕ, ‘ಮುಖ್ಯ ಶಿಕ್ಷಕಿ ಬಿಡುಗಡೆ ವಿಳಂಬ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಕೇಳಿದ ಒಂದೇ ಪ್ರಶ್ನೆಗೇ ಶಿಕ್ಷಣ ಇಲಾಖೆ ನಾಲ್ಕು ರೀತಿಯ ಉತ್ತರ ನೀಡಿದೆ’ ಎಂದು ಹೇಳಿದರು.

‘ಪ್ರೇಮಾ ಅವರನ್ನು ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ಅವರನ್ನು ಅಳವಳ್ಳಿ ಶಾಲೆಯಿಂದ ಬಿಡುಗಡೆ ಮಾಡಲು ಒಪ್ಪುತ್ತಿಲ್ಲ. ಕ್ಷೇತ್ರ ಶಿಕ್ಷಾಣಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ತಾಲ್ಲೂಕಿನಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇಲ್ಲ. ಹಾಗಾಗಿ, ಪ್ರೇಮಾ ಭಟ್ಟ ಅವರನ್ನು ಅದೇ ಶಾಲೆಯಲ್ಲಿ ಮುಂದುವರಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಪ್ರೇಮಾ ಭಟ್ಟ ಅವರನ್ನು ಬಿಡುಗಡೆ ಮಾಡದಿರುವುದನ್ನು ವಿರೋಧಿಸಿ, ಶಾಲಾಭಿವೃದ್ಧಿ ಸಮಿತಿಯ ಹಿಂದಿನ ಅಧ್ಯಕ್ಷರೇ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರತಿನಿಧಿ ಶಿವರಾಂ ಭಟ್ಟ, ‘ಮುಖ್ಯ ಶಿಕ್ಷಕರ ಹುದ್ದೆ ತಾಲ್ಲೂಕಿನಲ್ಲಿ ಖಾಲಿ ಇಲ್ಲ. ಆದಾಗ್ಯೂ ಪ್ರೇಮಾ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿದರೆ ಅಲ್ಲಿ ಅವರು ಸಹ ಶಿಕ್ಷಕಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಬಾಲಕೃಷ್ಣ ನಾಯ್ಕ ಹಾಗೂ ಮಹೇಶ ಶೆಟ್ಟಿ, ಜಗನ್ನಾಥ ನಾಯ್ಕ, ‘ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದೆ ಎಂದು ಉಪನಿರ್ದೇಶಕರೇ ವರ್ಗಾವಣೆ ಆದೇಶದಲ್ಲಿ ತಿಳಿಸಿದ್ದಾರೆ. ನೀವು ಈಗ ಹುದ್ದೆ ಖಾಲಿ ಇಲ್ಲ ಎನ್ನುತ್ತಿದ್ದೀರಲ್ಲ?’ ಎಂದು ಪ್ರಶ್ನಿಸಿದಾಗ, ಶಿವರಾಮ ಭಟ್ಟ ನಿರುತ್ತರರಾದರು.

ಬಳಿಕ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕುರಿಯವರ್, ವರ್ಗಾವಣೆ ಕುರಿತು ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವಿಜಯಾ ಪಟಗಾರ, ಉಪಾಧ್ಯಕ್ಷೆ ಗೀತಾ ಮುಕ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ನಾಯಕ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.