ADVERTISEMENT

ಸಂತೆಗೆ ಬಂದ ‘ಶ್ರೀರಾಮ ಕಂದಮೂಲ’!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 7:18 IST
Last Updated 23 ಅಕ್ಟೋಬರ್ 2017, 7:18 IST
ಕಾರವಾರದ ಭಾನುವಾರ ಸಂತೆಯಲ್ಲಿ ‘ಶ್ರೀರಾಮ ಕಂದಮೂಲ’ ಗೆಡ್ಡೆಯನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು
ಕಾರವಾರದ ಭಾನುವಾರ ಸಂತೆಯಲ್ಲಿ ‘ಶ್ರೀರಾಮ ಕಂದಮೂಲ’ ಗೆಡ್ಡೆಯನ್ನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು   

ಕಾರವಾರ: ಇಲ್ಲಿನ ಭಾನುವಾರ ಸಂತೆಗೆ ‘ಶ್ರೀರಾಮ ಕಂದಮೂಲ’ ಎನ್ನುವ ಗೆಡ್ಡೆಯನ್ನು ವ್ಯಾಪಾರಕ್ಕಾಗಿ ತರಲಾಗಿತ್ತು. ಅಪರೂಪದ ಈ ಗೆಡ್ಡೆಯು ಗ್ರಾಹಕರ ಗಮನ ಸೆಳೆಯಿತು. ಆಂಧ್ರಪ್ರದೇಶದಿಂದ ಬಂದಿದ್ದ ಕೆಲ ವ್ಯಾಪಾರಿಗಳು ಸಂತೆಯ ಅಲ್ಲಲ್ಲಿ ಈ ಗೆಡ್ಡೆಯನ್ನು ಕೊಯ್ದು ಮಾರಾಟ ಮಾಡುತ್ತಿದ್ದರು.

ಜನರು ಕುತೂಹಲದಿಂದ ಹತ್ತಿರ ಹೋಗಿ ಇದರ ಬಗ್ಗೆ ವ್ಯಾಪಾರಿ ಬಳಿ ವಿಚಾರಿಸುತ್ತಿದ್ದರು. ಕೆಲವರು ಖರೀದಿಸಿ ಅದರ ರುಚಿ ನೋಡಿದರೆ, ಇನ್ನು ಕೆಲವರು ಕೊಳ್ಳಲು ಹಿಂದೇಟು ಹಾಕಿದರು.

ಗೆಡ್ಡೆಗೆಣಸುವಿನಂತೆಯೇ ಇದು ಒಂದು ತೆರನಾದ ಸಿಹಿಯುಳ್ಳ ಗೆಡ್ಡೆ. ಮಳೆ ಬಿದ್ದ ಸಂದರ್ಭ ತೇವಾಂಶದಲ್ಲಿ ಇದು ಚಿಗುರಿಕೊಳ್ಳುತ್ತದೆ. ಇದರ ಬುಡ ಮತ್ತು ದಂಟು ತಿನ್ನಲು ಯೋಗ್ಯವಾಗಿರುತ್ತವೆ. ಇದರ ಹೊರಪದರು ಕೇಸರಿ ಬಣ್ಣದಿಂದ ಕೂಡಿದ್ದು, ಒಳಭಾಗ ಭಾಗ ಬಿಳಿಯಾಗಿದೆ.

ADVERTISEMENT

ಆರೋಗ್ಯಕ್ಕೆ ಹಿತ: ‘ಇದು ಪಿತ್ತ, ಕಫ, ಉಷ್ಣ ಸೇರಿದಂತೆ ವಿವಿಧ ಕಾಯಿಲೆಗಳ ಪರಿಹಾರಕ್ಕೂ ಕೂಡ ಉತ್ತಮ ಆಹಾರ. ಆರೋಗ್ಯಕ್ಕೆ ಹಿತಕರವಾದ ಈ ಗೆಡ್ಡೆ ವರ್ಷದಲ್ಲಿ ಒಂದು ಬಾರಿ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತದೆ. ಅಲ್ಲಿಂದ ತಂದು ನಾಡಿನಲ್ಲಿ ಮಾರಾಟ ಮಾಡಲಾಗುತ್ತದೆ’ ಎಂದು ವ್ಯಾಪಾರಿ ಹುಲಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಗೆಡ್ಡೆ ಕನಿಷ್ಟ 3 ಕೆ.ಜಿ.ಯಿಂದ 30 ಕೆ.ಜಿ.ಯವರೆಗೂ ಬೆಳೆಯುತ್ತದೆ. ಇದನ್ನು ಕೊಯ್ದು ಮಾರಾಟ ಮಾಡಲಾಗುತ್ತಿದ್ದು, ಅಂಗೈನಷ್ಟು ಅಗಲದ ಒಂದು ಪದರಿಗೆ ₹ 10, ಮೇಲ್ಭಾಗದ ಒಂದು ಸುತ್ತಿಗೆ ₹ 40 ರಂತೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.