ADVERTISEMENT

ಸಾವಯವ ತರಕಾರಿ ಖರೀದಿಗೆ ಬಿಗ್ ಬಾಸ್ಕೆಟ್ ಒಲವು

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:30 IST
Last Updated 22 ಮೇ 2017, 7:30 IST

ಶಿರಸಿ: ಆನ್‌ಲೈನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಬಿಗ್ ಬಾಸ್ಕೆಟ್ ಕಂಪೆನಿಯುವ ತಾಲ್ಲೂಕಿನಲ್ಲಿ ಬೆಳೆದ ಸಾವಯವ ತರಕಾರಿ ಖರೀದಿಗೆ ಆಸಕ್ತಿ ತೋರಿದೆ.
ತಾಲ್ಲೂಕಿನ ಬಂಕನಾಳ ಗ್ರಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯು ನಬಾರ್ಡ್ ಸಹಯೋಗದಲ್ಲಿ ರಚಿಸಿರುವ ಮಧುಕೇಶ್ವರ ಭತ್ತ ಉತ್ಪಾದಕರ ಸಹಕಾರಿ ಸಂಘದ ಮೂಲಕ ರೈತರು ಸಾವಯವ ಪದ್ಧತಿಯಲ್ಲಿ ಬೆಳೆದ ಗದ್ದೆಗೆ ಶನಿವಾರ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ರಮೇಶ ಎಂ ಹಾಗೂ ತಂಡದವರು ಭೇಟಿ ನೀಡಿ ಪರಿಶೀಲಿಸಿದರು.

ರೈತ ರವಿ ನಾಯ್ಕ ಮತ್ತಿಹಳ್ಳಿ ಅವರು ಕೊಳವೆಬಾವಿಯ ನೀರಾವರಿ ವ್ಯವಸ್ಥೆಯಿಂದ 1.20 ಎಕರೆ ಪ್ರದೇಶದಲ್ಲಿ ಎಲೆಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಮೆಣಸು, ಬೀನ್ಸ್, ಗೆಣಸು, ಬಾಳೆ, ತೊಂಡೆಕಾಯಿ ಬೆಳೆದಿದ್ದಾರೆ.

ಇದನ್ನು ನೋಡಿ ಸಂತಸ ವ್ಯಕ್ತಪಡಿಸಿದ ಕಂಪೆನಿ ಪ್ರತಿನಿಧಿಗಳು ‘ಈ ಭಾಗದಲ್ಲಿ ಗುಣಮಟ್ಟದ ತರಕಾರಿಗಳನ್ನು ರೈತರು ಬೆಳೆಸುತ್ತಿದ್ದಾರೆ. ರೈತರಿಂದ ನೇರವಾಗಿ ಇದನ್ನು ಖರೀದಿಸಲು ಕಂಪೆನಿಯಲ್ಲಿ ಅವಕಾಶವಿದೆ’ ಎಂದರು.

ADVERTISEMENT

ಭತ್ತ ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪತಿ ನಾಯ್ಕ ಮಾಹಿತಿ ನೀಡಿ ‘ಸಂಘದ ಮೂಲಕ ಅನೇಕ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ. ದೇಸಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೇರೇಪಿಸಲಾಗಿದೆ’ ಎಂದರು.

‘ಸಾವಯವ ಉತ್ಪನ್ನಗಳನ್ನು ಖರೀದಿಸಲು ಕಂಪೆನಿ ಸಿದ್ಧವಿದೆ. ಆದರೆ ಸಾವಯವ ಮಾದರಿಯಲ್ಲಿ ಬೆಳೆದಿರುವ ಬಗ್ಗೆ ದೃಢೀಕರಣ ಇರಬೇಕು. ನಮ್ಮ ಊರಿನ ಇನ್ನೊಬ್ಬ ರೈತ ಹನುಮಂತಪ್ಪ ಸಹ ಹೊಲದಲ್ಲಿ ತರಕಾರಿ ಬೆಳೆದಿದ್ದಾರೆ. ಸಂಘದ ಪ್ರತಿನಿಧಿಗಳು ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಕಂಪೆನಿಯನ್ನು ಸಂಪರ್ಕಿಸಲಾಗುವುದು’ ಎಂದು ಸಹಕಾರಿ ಸಂಘದ ಅಧ್ಯಕ್ಷ ಸಿ.ಎಫ್. ನಾಯ್ಕ ಹೇಳಿದರು.

ಬರುವ ದಿನಗಳಲ್ಲಿ ಸಂಘದ ಮುಖಾಂತರ ರೈತರಿಗೆ ರಿಯಾಯಿತಿ ದರದಲ್ಲಿ ಭತ್ತ, ತರಕಾರಿ ಬೀಜ ವಿತರಣೆ ಮಾಡಲು ಯೋಚಿಸಲಾಗಿದೆ. ಬಿಗ್ ಬಾಸ್ಕೆಟ್ ಕಂಪೆನಿ ಸಾವಯವ ಉತ್ಪನ್ನ ಖರೀದಿ ಮುಂದಾದಲ್ಲಿ ಸಂಘ ರೈತರು ಮತ್ತು ಕಂಪೆನಿ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಸಿದ್ಧವಿದೆ’ ಎಂದರು. ಪ್ರಮುಖರಾದ ಗಣೇಶ ಹೆಗಡೆ ಮರಗುಂಡಿ, ಭೈರಪ್ಪ ಎಲ್. ನಾಯ್ಕ, ರವಿ ದೇವೇಂದ್ರ ನಾಯ್ಕ ಮತ್ತಿಹಳ್ಳಿ ಹಾಜರಿದ್ದರು.

* * 

ರೈತರು ಬೆಳೆಯುವ ಉತ್ಪನ್ನಗಳ ಖರೀದಿಗೆ ಕಂಪೆನಿಗಳು ಮುಂದಾದಲ್ಲಿ ತೀವ್ರ ಬರ ಎದುರಿಸುತ್ತಿರುವ ನಮಗೆ ಇದು ವರದಾನವಾಗಲಿದೆ
ಸಿ.ಎಫ್. ನಾಯ್ಕ
ಮಧುಕೇಶ್ವರ ಭತ್ತ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.