ADVERTISEMENT

ಹೆಚ್ಚಿದ ತಾಪಮಾನ; ಹೈನುಗಾರಿಕೆಗೆ ಹೊಡೆತ

ಸಂಧ್ಯಾ ಹೆಗಡೆ
Published 22 ಮೇ 2017, 7:34 IST
Last Updated 22 ಮೇ 2017, 7:34 IST

ಶಿರಸಿ: ವಾತಾವರಣದಲ್ಲಿ ಹೆಚ್ಚಿದ ತಾಪಮಾನ ಹೈನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದ್ದು ದಿನಕ್ಕೆ ಅಂದಾಜು ₹ 2.80 ಲಕ್ಷ ನಷ್ಟವಾಗುತ್ತಿದೆ.

ಹಾಲಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ, ಹಾಲು ಡೇರಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಿಂದ ಜಿಲ್ಲೆಯಲ್ಲಿ ಹೈನುಗಾರಿಕೆ ವಿಸ್ತರಣೆಯಾಗಿದೆ. ಒಟ್ಟು 208 ಹಾಲು ಉತ್ಪಾದಕ ಸಹಕಾರಿ ಸಂಘಗಳು (ಡೇರಿ) ಕಾರ್ಯನಿರ್ವಹಿಸುತ್ತಿವೆ. ಈ ಸಂಘಗಳು ರೈತರಿಂದ ದಿನಕ್ಕೆ ಸರಾಸರಿ 42,300 ಲೀಟರ್ ಹಾಲು ಸಂಗ್ರಹಿಸಿ ಧಾರವಾಡ ಹಾಲು ಒಕ್ಕೂಟಕ್ಕೆ ನೀಡುತ್ತಿದ್ದವು. ಮಾರ್ಚ್ ತಿಂಗಳ ನಂತರ ಬೇಸಿಗೆಯ ತೀವ್ರತೆ ಹೆಚ್ಚಿದ್ದರಿಂದ ಕೇವಲ 32 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ದಿನಕ್ಕೆ 10 ಸಾವಿರ ಲೀಟರ್ ಹಾಲು ಕಡಿಮೆಯಾಗಿದೆ.

‘ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲ, ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 40ಸಾವಿರ ಲೀಟರ್ ಹಾಲು ಕಡಿಮೆಯಾಗಿದೆ. ಈ ಮೊದಲು ಪ್ರತಿದಿನ 2.21 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ ಈಗ ಇದು 1.80 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಾದಾಗ ಜಾನುವಾರುಗಳಲ್ಲಿ ಹಾಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಜೊತೆಗೆ ಗುಣಮಟ್ಟ ಸಹ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ.

ADVERTISEMENT

‘ಸೆಖೆಯ ಹೊಡೆತಕ್ಕೆ ಹಾಲಿನ ಗುಣಮಟ್ಟ ಕುಸಿದಿದೆ. ಹಾಲಿನ ಡಿಗ್ರಿ ಮತ್ತು ಕೊಬ್ಬು ಕಡಿಮೆಯಾಗಿ ಲೋ ಎಸ್‌ಎನ್‌ಎಫ್ ಸಮಸ್ಯೆ ತೀವ್ರವಾಗಿದೆ. ಇದು ಸಾಮೂಹಿಕ ಸಮಸ್ಯೆಯಾಗಿರುವುದರಿಂದ ಹೊಂದಾಣಿಕೆ ಮಾಡಿಕೊಂಡು ಒಕ್ಕೂಟ ಹಾಲನ್ನು ಖರೀದಿಸುತ್ತಿದೆ. ಮಳೆಗಾಲ ಆರಂಭವಾದ ಮೇಲೆ ಹಾಲು ಉತ್ಪಾದನೆ ವೃದ್ಧಿಯಾಗುವ ಜತೆಗೆ ಲೋ ಎಸ್‌ಎನ್‌ಎಫ್ ಸಮಸ್ಯೆ ನಿವಾರಣೆಯಾಗುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

‘ನೀರಿನ ಕೊರತೆಯಿಂದ ಅನೇಕ ರೈತರು ಜಾನುವಾರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ವಿಶೇಷವಾಗಿ ಶಿರಸಿ ತಾಲ್ಲೂಕಿನ ಪೂರ್ವ ಭಾಗ, ಕರಾವಳಿ, ಮುಂಡಗೋಡ, ಹಳಿಯಾಳ ಭಾಗಗಳಲ್ಲಿ ದನ, ಎಮ್ಮೆ ಮಾರಾಟ ಜೋರಾಗಿದೆ. ಮೂರ್ನಾಲ್ಕು ಆಕಳು ಸಾಕಿಕೊಂಡವರು ನೀರು, ಮೇವು ಪೂರೈಕೆ ಮಾಡಲು ಸಾಧ್ಯವಾಗದೇ ಎರಡು ಆಕಳನ್ನು ಮಾತ್ರ ಇಟ್ಟುಕೊಳ್ಳುತ್ತಿರುವ ಸಂಗತಿ ಅನೇಕ ಕಡೆಗಳಲ್ಲಿ ಗಮನಕ್ಕೆ ಬಂದಿದೆ. ಈವರೆಗೆ ಸುಮಾರು 400ರಷ್ಟು ಆಕಳು ಮಾರಾಟವಾಗಿರಬಹುದೆಂದು ಅಂದಾಜಿಸಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸರ್ಕಾರ ಭರವಸೆ ನೀಡಿದ್ದ ಮೇವು ಘಟಕವನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲು ಆಡಳಿತ ಮೀನಮೇಷ ಎಣಿಸುತ್ತಿದೆ. ಒಣ ಮೇವು ಸಂಗ್ರಹಕ್ಕೆ ರೈತರು ಪೂರ್ವಿ ಸಿದ್ಧತೆ ಮಾಡಿಕೊಂಡಿದ್ದರಿಂದ ಅಷ್ಟಾಗಿ ಮೇವಿನ ಕೊರತೆ ಕಾಣುತ್ತಿಲ್ಲ. ಆದರೆ ಹಾಲು ಉತ್ಪಾದನೆ ಕುಂಠಿತವಾಗಿ ರುವುದರಿಂದ ಪ್ರತಿ ಲೀಟರ್‌ಗೆ ಸರಾಸರಿ ₹ 28 ದರ (ಲೋ ಎಸ್‌ಎನ್‌ಎಫ್ ಸಮಸ್ಯೆಯ ನಡುವೆ) ಲೆಕ್ಕ ಹಾಕಿದರೆ ದಿನಕ್ಕೆ ಅಂದಾಜು ₹ 2.80 ಲಕ್ಷ ನಷ್ಟವಾಗುತ್ತಿದೆ’ ಎಂದು ಅವರು ತಿಳಿಸಿದರು.

ಹಸಿ ಹುಲ್ಲಿನಿಂದ ಹಾಲಿನ ಪ್ರಮಾಣ ಹೆಚ್ಚಾಗುತ್ತದೆ. ಹಸಿ ಹುಲ್ಲಿನ ಕೊರತೆ, ಬಿಸಿಲಿನ ತೀವ್ರತೆ ಹಾಲು ಇಳಿಮುಖವಾಗಲು ಕಾರಣವಾಗಿದೆ. ಕೃಷಿ ಬೆಳೆ ನಷ್ಟದ ಜತೆಗೆ ವರದಾನವಾಗಿದ್ದ ಹೈನುಗಾರಿಕೆಗೆ ಪೆಟ್ಟು ಬಿದ್ದಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೃಷಿಕ ಸಂದೇಶ ಭಟ್ಟ ಹೇಳಿದರು.

* *

ಜಲಕ್ಷಾಮದಿಂದ ರೈತರು ಆಕಳು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಹಳ್ಳಿಗಳಲ್ಲಿ ಕೊಟ್ಟಿಗೆಗಳು ಖಾಲಿಯಾಗುತ್ತಿವೆ
ಸುರೇಶ್ಚಂದ್ರ ಹೆಗಡೆ
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.