ADVERTISEMENT

₨ 1.49 ಲಕ್ಷ ಮೌಲ್ಯದ ಗೋವಾ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:09 IST
Last Updated 18 ಜನವರಿ 2017, 5:09 IST
₨ 1.49 ಲಕ್ಷ ಮೌಲ್ಯದ ಗೋವಾ ಮದ್ಯ ವಶ
₨ 1.49 ಲಕ್ಷ ಮೌಲ್ಯದ ಗೋವಾ ಮದ್ಯ ವಶ   

ಕಾರವಾರ: ತಾಲ್ಲೂಕಿನ ಮುಡಗೇರಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಕೂಟರ್‌ನಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಡಿಸಿಐಬಿ ಪೊಲೀಸರ ತಂಡವು ₨ 1.49 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪೊಲೀಸರನ್ನು ಕಂಡ ಆರೋಪಿಗಳಿಬ್ಬರು ಸ್ಕೂಟರ್‌ ಹಾಗೂ ಮದ್ಯದ ಬಾಟಲಿ ಇರುವ ಚೀಲವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಪ್ರಕರಣ ಚಿತ್ತಾಕುಲ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್ ಆಂಜನೇಯ, ಸಿಬ್ಬಂದಿ ದರ್ಶನ್‌ ಪವಾರ್‌, ವಿನೋದ್‌, ನರಸಿಂಹ ಹಾಗೂ ಮಹದೇವ ಗೊಂಡ ಭಾಗವಹಿಸಿದ್ದರು.

ಸಾರಿಗೆ ಬಸ್ ಹಾಯ್ದು ವ್ಯಕ್ತಿ ಸಾವು
ಅಂಕೋಲಾ: ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ ಮಂಗಳವಾರ ಸಾರಿಗೆ ಬಸ್ ಹಾಯ್ದು ವ್ಯಕ್ತಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ. ಮೃತನನ್ನು ಸಂತೋಷ ಹರಿಶ್ಚಂದ್ರ ನಾಯ್ಕ (35) ಎಂದು ಗುರುತಿಸಲಾಗಿದೆ. ಫಿಟ್ಸ್ ಕಾಯಿಲೆಯಿಂದ ಆಕಸ್ಮಿಕವಾಗಿ ಬಸ್ ನಿಲ್ದಾಣದ ಬಳಿ ಈತ ಬಿದ್ದದ್ದನ್ನು ಗಮನಿಸದ ಚಾಲಕ ಗ್ರಾಮದ ಗಾಬಿತವಾಡ ತಿರುವಿನಲ್ಲಿ ಬಸ್ಸನ್ನು ಹಿಂಬದಿ ತಿರುಗಿಸುವಾಗ ಗಾಲಿಗೆ ಸಿಕ್ಕು ಈತನು ಮೃತಪಟ್ಟಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಮುದ್ರಕ್ಕೆ ಹಾರಿ ಆತ್ಮಹತ್ಯೆ
ಕುಮಟಾ: ಅನಾರೋಗ್ಯ ವಾಸಿಯಾಗದ ಕಾರಣ  ವ್ಯಕ್ತಿಯೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ  ವನ್ನಳ್ಳಿ ಸಮೀಪದ ಗುಂದದಲ್ಲಿ ಸಂಭವಿಸಿದೆ.

ಮೃತನನ್ನು ಕುಮಟಾ ನ್ಯಾಯಾಲಯ ರಸ್ತೆ ಬಳಿ ವೆಲ್ಡಿಂಗ್ ಶಾಪ್ ನಡೆಸುವ  ಸ್ಥಳೀಯ ಸಾನಿಯಲ್ ಹರ್ಷ ಅಮನ್ (44) ಎಂದು ಗುರುತಿಸಲಾಗಿದೆ.  ಮೃತನಿಗೆ ಪತ್ನಿ ಹಾಗೂ ಒಬ್ಬ ಮಗ ಇದ್ದಾರೆ. ನವೀನ್ ಹೊರಸಾ ಅಮನ್ ಎನ್ನುವವರು ದೂರು ನೀಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ : ಬಂಧನ
ಸಿದ್ದಾಪುರ :  ಓಸಿ (ಮಟ್ಕಾ) ಆಡುತ್ತಿದ್ದ ಆರೋಪದ ಮೇರೆಗೆ   ಬೇಡ್ಕಣಿಯ ಬಂಗಾರ್ಯಾ ರಾಮಾ ನಾಯ್ಕ ಹಾಗೂ ತ್ಯಾರ್ಸಿಯ ಮಂಜಾ  ಹುಲಿಯಾ ನಾಯ್ಕ ಅವರನ್ನು ತಾಲ್ಲೂಕಿನ ಬೇಡ್ಕಣಿಯಲ್ಲಿ ಬಂಧಿಸಿ,  ₹530 ನಗದು, ಮಟ್ಕಾ ಚೀಟಿ ಮತ್ತಿತರ ವಸ್ತುಗಳನ್ನು ಸೋಮವಾರ ಸಂಜೆ ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್ಐ ಶಿವಕುಮಾರ ಬಿ.ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಣೆ: ವಶ
ಬೆಳಗಾವಿ: ಇಲ್ಲಿನ ಶಹಾಪುರ ಠಾಣೆ ವ್ಯಾಪ್ತಿ ವಡಗಾವಿಯ ಯರಮಾಳ ರಸ್ತೆಯಲ್ಲಿ ಟಿಪ್ಪರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರ್‌ ಹಾಗೂ ₹ 12,000 ಮೌಲ್ಯದ ಮರಳನ್ನು ಪೊಲೀಸರು ಮಂಗಳವಾರ ವಶಪಡಿಸಿ ಕೊಂಡಿದ್ದಾರೆ.ವಿಶೇಷ ಠಾಣೆಯ ಇನ್‌ಸ್ಪೆಕ್ಟರ್‌ ಜಿ. ಆರ್ ಗಡ್ಡೇಕರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.