ADVERTISEMENT

5 ಟಿಎಂಸಿ ಅಡಿ ನೀರು ಉಳಿಸಲು ಯೋಜನೆ

ಎಂ.ಜಿ.ನಾಯ್ಕ
Published 12 ಸೆಪ್ಟೆಂಬರ್ 2017, 5:53 IST
Last Updated 12 ಸೆಪ್ಟೆಂಬರ್ 2017, 5:53 IST

ಕುಮಟಾ: ಸ್ವಾತಂತ್ರ್ಯ ಪೂರ್ವದಲ್ಲಿ ಹತ್ತಿ ವ್ಯಾಪಾರದ ಮೂಲಕ ಅಂತರ­ರಾಷ್ಟ್ರೀಯ ಖ್ಯಾತಿ ಹೊಂದಿದ್ದ ನಯನ ಮನೋಹರ ತಾಣವಾದ ಕುಮಟಾದ ಹೆಡ್ ಬಂದರು ಪ್ರದೇಶವನ್ನು ಈಗ ₹ 3 ಕೊಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸುತ್ತಿದೆ.

ಬ್ರಿಟಿಷರ ಕಾಲದಲ್ಲಿ ಮಂಗಳೂರು ಬಿಟ್ಟರೆ ರಾಜ್ಯದ ಪ್ರಮುಖ ಬಂದರು ಎನಿಸಿಕಂಡಿದ್ದ ಕುಮಟಾ ಹೆಡ್ ಬಂದರು ಮೂಲಕ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ಬರುತ್ತಿದ್ದ ಹತ್ತಿ, ಕೆಂಪು ಮೆಣಸು, ಸಾಂಬಾರು ಪದಾರ್ಥ, ಸ್ಥಳೀಯ ಕಟ್ಟಿಗೆ ಮುಂತಾದವು ಮುಂಬೈಗೆ ಮೂಲಕ ಅಲ್ಲಿಂದ ಲಂಡನ್, ಮ್ಯಾಂಚೆಸ್ಟರ್ ನಗರಗಳಿಗೆ ರಫ್ತಾಗುತ್ತಿದ್ದವು.

ಆದರೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದ್ದ ವಸ್ತುವೆಂದರೆ ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಿಂದ ಬರುವ ಹತ್ತಿಯಾಗಿತ್ತು. ಕುಮಟಾ ಪಟ್ಟಣದ ಪ್ರತಿಷ್ಠಿತ ಗಿಬ್ ಪ್ರೌಢ ಶಾಲೆಯ ಎಲ್ಲ ಹಳೆಯ ಕಟ್ಟಡಗಳು ಹಿಂದೆ ಹತ್ತಿ ವ್ಯಾಪಾರಕ್ಕೆ ಬಳಕೆಯಾಗುತ್ತಿದ್ದವು. ಈ ಪ್ರೌಢ ಶಾಲೆಗೆ ಗಿಬ್ ಎನ್ನುವ ಬ್ರಿಟಿಷ್ ಅಧಿಕಾರಿ ಆಗಿನ ಬ್ರಿಟಿಷ್ ಸರ್ಕಾದ ಮಾನ್ಯತೆ ಪಡೆಯಲು ಶ್ರಮಿಸಿದ್ದರಿಂದ ಆತನ ನೆನಪಿಗಾಗಿ ಶಾಲೆಗೆ ಆತನ ಹೆಸರು ಇಡಲಾಗಿದೆ.

ADVERTISEMENT

ಅಂತೆಯೇ ಪಟ್ಟಣದ ನ್ಯಾಯಾಲಯ ಸಂಕಿರ್ಣದ ಬಳಿ ಇರುವ ಅನೇಕ ಹಳೆಯ ಕಟ್ಟಡಗಳು ಕೂಡ ಬ್ರಿಟಿಷರ ವ್ಯಾಪಾರಕ್ಕೆ ಬಳಕೆಯಾಗಿದ್ದವು. ಕುಮಟಾ ಮೂಲಕ ನಡೆಯುತ್ತಿದ್ದ ಹತ್ತಿಯ ವ್ಯಾಪಾರದ ಖ್ಯಾತಿಯ ಕಾರಣ­ದಿಂದ ಲಂಡನ್ ಹಾಗೂ ಮುಂಬೈನಲ್ಲಿ ಈಗಲೂ ‘ಕುಮಟಾ ಕಾಟನ್ ಮಾರ್ಕೆಟ್’ ಇದೆಯಂತೆ.

ಹೆಡ್ ಬಂದರಿನಲ್ಲಿ ದೊಡ್ಡ ದೊಡ್ಡ ಹಾಯಿ ದೋಣಿಗಳ ಮೂಲಕ ಮುಂಬೈಗೆ ಒಯ್ಯುವ ಸಾಮಗ್ರಿಗಳ ಸಂಗ್ರಹಿಸುವ ಗೋದಾಮುಗಳಿದ್ದವು. ಅವುಗಳನ್ನು ಸುಣ್ಣ, ಬೆಲ್ಲ ಹಾಕಿ ತಯಾರಿ­ಸಿದ ಗಾರೆ ಬಳಸಿ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿತ್ತು. ಅವುಗಳ ಛಾವಣಿ ಕುಸಿದು ಬಿದ್ದರೂ ಗೋಡೆಗಳು ಮೊನ್ನೆಯವರೆಗೂ ಭದ್ರವಾಗಿದ್ದವು.

ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸು­ವಾಗ ಬ್ರಿಟಿಷರ ವ್ಯಾಪಾರದ ಕೊನೆಯ ಅವಶೇಷಗಳಿಂತಿದ್ದ ಗೋದಾಮು ಕಟ್ಟಡಗಳ ಗೋಡೆಗಳನ್ನು ಕೆಡವಿ ಹಾಕಲಾಗಿದೆ. ಅವುಗಳನ್ನು ಕೆಡವಿ ಹಾಕುವ ಬದಲು ಅದೇ ಸ್ಥಿತಿಯಲ್ಲಿ ಅಭಿವೃದ್ಧಿ ಪಡಿಸಿದ್ದರೆ ಸ್ಥಳೀಯ ಇತಿಹಾಸ ಅರಿಯಲು ಎಳೆಯ ಪೀಳಿಗೆಗೆ ಅನು­ಕೂಲ­ವಾಗುತ್ತಿತ್ತು ಎಂದು ವಿಮರ್ಶಕ ಹಾಗೂ ಇಲ್ಲಿಯ ಡಾ. ಎ.ವಿ. ಬಾಳಿಗಾ ಕಲಾ–ವಿಜ್ಞಾನ ಮಹಾವಿದ್ಯಾಲಯ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪ್ರೊ. ಎಂ.ಜಿ. ಹಗಡೆ ಮತ್ತಿತರರು ತೀವ್ರ ಆಕ್ಷೇಪ  ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದಿಂದ ಪ್ರವಾಸೋ­ದ್ಯಮ ಇಲಾಖೆ ರಾಜ್ಯದ ಬೀಚ್ ಅಭಿವೃದ್ಧಿ ಯೋಜನೆಯಡಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಇಲ್ಲಿ ವಿವಿಧ ಸೌಲಭ್ಯ ಕಲ್ಪಿಸುವ ಕಾಮಗಾರಿ ನಡೆಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ, ‘ಹೆಡ್ ಬಂದರು ಗುಡ್ಡದಿಂದ ಪೂರ್ವದ ಕಡೆ ನೋಡಿದರೆ ಕುಮಟಾ ಪಟ್ಟಣದ ದಡಕ್ಕೆ ಸಮುದ್ರ ಅಲೆಗಳು ಅಪ್ಪಳಿಸುವ ನಯನಮನೋಹರ ನೋಟ ಕಾಣು­ತ್ತದೆ.

ಪಶ್ಚಿಮಕ್ಕೆ ತಿರುಗಿ ನೋಡಿದರೆ ಸಮುದ್ರದಲ್ಲಿ ಹತ್ತಾರು ಮೈಲಿಗಳ ದೂರದಿಂದ ಹಡಗುಗಳು ಬರುವುದು ಕಾಣುತ್ತದೆ. ಹಿಂದೆ ಬ್ರಿಟಿಷರ ಕಾಲದಲ್ಲಿ ಕುಮಟಾ ಪಟ್ಟಣಕ್ಕೆ ಬರುವ ವ್ಯಾಪಾರಿ ಹಡಗುಗಳ ವೀಕ್ಷಣೆಗಾಗಿ ಇಲ್ಲೊಂದು ವೀಕ್ಷಣಾ ಗೋಪುರವಿತ್ತು. ಪ್ರವಾಸಿಗರಿಗೆ ಅನುಕೂಲವಾಗುವಂತೆ ಈಗ ಮತ್ತೆ ಅಭಿವೃದ್ಧಿ­ಪಡಿಸಲಾಗುತ್ತಿದೆ’ ಎಂದರು.

ಹೆಡ್ ಬಂದರು ಗುಡ್ಡಕ್ಕೆ  ಬರಲು ಅನುಕೂಲವಾಗುವಂತೆ ಸುಮಾರು 5 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸ­ಲಾಗಿದೆ. ಗುಡ್ಡದಲ್ಲಿ ಕುಳಿತುಕೊಳ್ಳಲು ಸಿಮೆಂಟ್ ಆಸನ, ಸುತ್ತಲೂ ಓಡಾಡಲು ಸಿಮೆಂಟ್ ಪೇವರ್ ಅಳವಡಿಸಿದ ಮೈದಾನ, ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆಗಾಗಿ ಹೈ ಮಾಸ್ಟ್‌ ದೀಪ ಅಳವಡಿಸಲಾಗಿದೆ.

ಇನ್ನು ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಕಾಫಿ, ಚಹ, ಲಘು ಉಪಹಾರದ ವ್ಯವಸ್ಥೆಯನ್ನು ಮಾಡುವ ಯೋಜನೆ ಇದೆ. ಅದರ ಈ ಪ್ರದೇಶದ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು.  ಇಲ್ಲಿ ಜನರು ಬರುವುದೇ ಅಪರೂಪವಾ­ಗಿದ್ದರಿಂದ ನೂರಾರು ವರ್ಷಗಳಿಂದ ಇದೊಂದು ಅಜ್ಞಾತ ಪ್ರದೇಶದಂತಿತ್ತು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.