ADVERTISEMENT

ಅಗೆದ ರಸ್ತೆ; ಸಂಚಾರಕ್ಕೆ ಸಂಚಕಾರ

ಬಾಬುಗೌಡ ರೋಡಗಿ
Published 20 ನವೆಂಬರ್ 2017, 11:03 IST
Last Updated 20 ನವೆಂಬರ್ 2017, 11:03 IST
ವಿಜಯಪುರದ ಲಕ್ಷ್ಮೀ ನಗರದಲ್ಲಿನ ರಸ್ತೆ ಮಧ್ಯವಿರುವ ಯುಜಿಡಿ ಅಗೆದು ಮುಚ್ಚದೇ ಬಿಟ್ಟಿರುವುದು
ವಿಜಯಪುರದ ಲಕ್ಷ್ಮೀ ನಗರದಲ್ಲಿನ ರಸ್ತೆ ಮಧ್ಯವಿರುವ ಯುಜಿಡಿ ಅಗೆದು ಮುಚ್ಚದೇ ಬಿಟ್ಟಿರುವುದು   

ವಿಜಯಪುರ: ವಿವಿಧ ಕಾಮಗಾರಿಗಳಿಗಾಗಿ ನಗರದಲ್ಲಿ ರಸ್ತೆ ಅಗೆಯುವುದು ಮುಂದುವರಿದಿದೆ. ಕೆಲವೆಡೆ ಕಾಮಗಾರಿ ಮುಗಿದರೂ ಗುಂಡಿ ಮುಚ್ಚದ ಕಾರಣ ಸಂಚಾರ ಕಷ್ಟವಾಗಿದೆ. ನೀರಿನ ಪೈಪ್‌ಲೈನ್‌, ಯುಜಿಡಿ, ಕೇಬಲ್‌ ಎಳೆಯವುದು ಸೇರಿದಂತೆ ವಿವಿಧ ಕಾಮಗಾರಿ ನಡೆದಿವೆ. ಪೂರ್ಣಗೊಂಡ ನಂತರ  ಸರಿಯಾಗಿ ಮುಚ್ಚದ ಕಾರಣ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.

‘ಅಭಿವೃದ್ಧಿ ಕಾರ್ಯಕ್ಕೆ ತಮ್ಮ ಸಹಕಾರವಿದೆ. ಆದರೆ ಅಗೆದ ರಸ್ತೆಯನ್ನು ಸಮರ್ಪಕವಾಗಿ ಮುಚ್ಚಿದರೇ ಸಮಸ್ಯೆ ಕಂಡು ಬರುವುದಿಲ್ಲ. ಆದರೆ, ನಗರದಲ್ಲಿ ಬೇರೆ ಬೇರೆ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚಿಲ್ಲ. ಇದರಿಂದ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ’ ಎನ್ನುತ್ತಾರೆ ಗಣೇಶ ನಗರದ ನಿವಾಸಿ ಬಸವರಾಜ ಬಿರಾದಾರ.

ಮನೆ ಎದುರಿನ ಗುಂಡಿಗಳನ್ನು ಕೂಡ ಸರಿಯಾಗಿ ಮುಚ್ಚುವುದಿಲ್ಲ. ಇದರಿಂದ ಸಂಚಾರಕ್ಕೆ ಮಾತ್ರವಲ್ಲದೇ ಮನೆ ಎದುರು ಬೈಕ್‌ ಹಚ್ಚಲು ಬಾರದಂತಾಗಿದೆ. ಮುಂದಿನ ದಿನಗಳಲ್ಲಿ  ಗುತ್ತಿಗೆದಾರರಿಗೆ ಕೆಲಸ ನೀಡುವ ಪೂರ್ವದಲ್ಲಿ ಕಾಮಗಾರಿ ಮುಗಿದ ನಂತರ ಮಣ್ಣಿನ ತೆರವು, ಗುಂಡಿ  ಸಮರ್ಪಕವಾಗಿ ಮುಚ್ಚಲು ಸೂಚಿಸಬೇಕು.

ADVERTISEMENT

ಒಂದು ವೇಳೆ ಸರಿಯಾಗಿ ಮುಚ್ಚದಿದ್ದರೇ ಮಾಡಿರುವ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಬಾರದು ಎಂದು ಬಿರಾದಾರ ಹೇಳಿದರು. ನಗರದ ಮುಖ್ಯ ರಸ್ತೆಯಿಂದ ಲಕ್ಷ್ಮೀ ದೇವಸ್ಥಾನವರೆಗಿನ ಅರ್ಧ ಕಿ.ಮೀ ಕ್ಕಿಂತ ಕಡಿದೆ ದೂರವಿರುವ ರಸ್ತೆಯಲ್ಲಿ ತಗ್ಗುಗಳು ಬಿದ್ದಿವೆ. ಸವಾರರು ಹರಸಾಹಸ ಪಡುವಂತಾಗಿದೆ ಎಂದು ಮನೋಜ ಪಾಟೀಲ ತಿಳಿಸಿದರು.

* * 

ಪೈಪ್‌ಲೈನ್‌ ಅಳವಡಿಕೆಗೆ ಮನೆ ಎದುರು ಅಗೆದ ಗುಂಡಿಯನ್ನು ಸಮರ್ಪಕವಾಗಿ ಮುಚ್ಚದಿರುವ ಕಾರಣ. ನಿತ್ಯ ಮನೆ ಎದುರಿನ ರಸ್ತೆ ಮಧ್ಯದಲ್ಲಿಯೇ ಬೈಕ್‌ ಹಚ್ಚಬೇಕಾಗಿದೆ
ಬಸವರಾಜ ಬಿರಾದಾರ 
ಗಣೇಶ ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.