ADVERTISEMENT

ಚುನಾವಣೆ; ಸಂಘಟನೆಯತ್ತ ಚಿತ್ತ

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:58 IST
Last Updated 24 ಮೇ 2017, 8:58 IST

ವಿಜಯಪುರ: ವಿಧಾನಸಭಾ ಚುನಾವಣೆ ಪೂರ್ವ ತಯಾರಿ ಆರಂಭಗೊಂಡಿದೆ. ತಾಲ್ಲೂಕು–ಜಿಲ್ಲಾ ಪಂಚಾಯ್ತಿ ಚುನಾವಣೆ ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಮೈಕೊಡವಿಕೊಂಡು ಚುರುಕಾಗಿದ್ದು, ಸಂಘಟನೆಯತ್ತ ತಮ್ಮ ಚಿತ್ತ ಹರಿಸಿವೆ.

ಆಂತರಿಕ ಬೇಗುದಿಯ ನಡುವೆಯೂ ಬಿಜೆಪಿ ವರ್ಷವಿಡಿ ಪಕ್ಷದ ಸಂಘಟನಾ ಚಟುವಟಿಕೆ ನಡೆಸಿಕೊಂಡು ಜೀವಂತಿಕೆ ಯನ್ನು ಕಾಪಾಡಿಕೊಂಡಿದ್ದು, ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಕಾಂಗ್ರೆಸ್‌–ಜೆಡಿಎಸ್‌ ವೀಕ್ಷಕರ ಭೇಟಿ ಬಳಿಕ ಪಕ್ಷದಲ್ಲಿ ಚಟುವಟಿಕೆ ಚುರುಕುಗೊಂಡಿವೆ.

ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ದಂತೆ ಪ್ರಾದೇಶಿಕ ಪಕ್ಷ ಜೆಡಿಎಸ್‌ನಲ್ಲೂ ಜಿಲ್ಲಾ ಘಟಕದ ಅಧ್ಯಕ್ಷರ ಕಾರ್ಯವೈಖರಿ ವಿರುದ್ಧ ಮುಖಂಡರಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ‘ಹಿರಿಯ ನಾಯಕರ ಮಾತುಗಳಿಗೆ ಮನ್ನಣೆ ನೀಡದೆ, ಕೆಜೆಪಿ ಮೂಲದವರ ಮಾತಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿಲ್ಲ’ ಎಂಬ ದೂರು ಈಚೆಗೆ ನಗರಕ್ಕೆ ಬಿ.ಎಸ್‌.ಯಡಿಯೂರಪ್ಪ ದಿಢೀರ್ ಭೇಟಿ ನೀಡಿದ ಸಂದರ್ಭವೂ ಕೇಳಿ ಬಂದಿತ್ತು.

ADVERTISEMENT

ನಾಯಕರ ಕೊರತೆ: ಜೆಡಿಎಸ್‌ ಜಿಲ್ಲಾ ಘಟಕದ ಚುಕ್ಕಾಣಿ ಹಿಡಿಯುವ ಸಮರ್ಥ ರಿಲ್ಲದೆ ‘ತೆನೆ ಹೊತ್ತ ಮಹಿಳೆ’ ಜಿಲ್ಲೆಯಲ್ಲಿ ಸೊರಗಿದೆ. ‘ನನಗೆ ಸಾಕಾಗಿದೆ, ಜವಾಬ್ದಾರಿಯಿಂದ ಮುಕ್ತಿಗೊಳಿಸಿ’ ಎಂದು ಈ ಹಿಂದೆ ಹಲವು ಬಾರಿ ಹಾಲಿ ಅಧ್ಯಕ್ಷ,  ಎಚ್‌.ಡಿ, ದೇವೇಗೌಡರ ಆಪ್ತ ಎಂ.ಸಿ.ಮನಗೂಳಿ ಸ್ವತಃ ಗೋಗರೆದರೂ ಅಧ್ಯಕ್ಷರ ಬದಲಾವಣೆ ನಡೆದಿಲ್ಲ.

‘ಮನಗೂಳಿ ಬದಲಾಯಿಸಿದರೆ ಮತ್ತೊಬ್ಬ ಸಮರ್ಥರನ್ನು ಅಧ್ಯಕ್ಷರನ್ನಾಗಿ ಮಾಡಲು ಜೆಡಿಎಸ್‌ನಲ್ಲಿ ನಾಯಕರ ಕೊರತೆ ಕಾಡುತ್ತಿದೆ. ಬಹುತೇಕರು ಅರೆಕಾಲಿಕ ರಾಜಕಾರಣಿಗಳು. ತಮ್ಮವೇ ವಿವಿಧ ದಂಧೆ ನಡೆಸುತ್ತಿದ್ದು, ನೆಪ ಮಾತ್ರಕ್ಕೆ ಚುನಾವಣೆ ಬಂದಾಗ ಪಕ್ಷದ ಕಚೇರಿಗೆ ಶ್ವೇತಧಾರಿಗಳಾಗಿ ಬರುತ್ತಾರೆ’ ಎಂಬ ದೂರು ಜೆಡಿಎಸ್‌ ಕಾರ್ಯ ಕರ್ತರದು.

‘ಬೂತ್‌ ಮಟ್ಟದಲ್ಲಿ ಕಾರ್ಯಕರ್ತ ರಿದ್ದರೂ, ಅವರ ಭಾವನೆಗಳಿಗೆ ಸ್ಪಂದಿ ಸುವ ನಾಯಕರು ಇಲ್ಲವಾಗಿದ್ದಾರೆ. ಚುನಾವಣೆ ಸಂದರ್ಭ ವಲಸೆ ಬಂದ ವರಿಗೆ ಟಿಕೆಟ್‌ ನೀಡಿ, ಪ್ರಾಮಾಣಿಕರನ್ನು ಕಡೆಗಣಿಸುವ ಸಂಪ್ರದಾಯ ಈ ಬಾರಿ ಯಾದರೂ ತಪ್ಪಲಿ. ಅರ್ಹತೆ ಇದ್ದವರಿಗೆ ಟಿಕೆಟ್‌ ನೀಡಲಿ’ ಎನ್ನುತ್ತಾರೆ ಜೆಡಿಎಸ್‌ ಮುಖಂಡ ಸತ್ತಾರ್‌ ಇನಾಮದಾರ.

ಪ್ರಭಾವಿಗೆ ‘ಕೈ’ ಚುಕ್ಕಾಣಿ; ಹಕ್ಕೊತ್ತಾಯ: ‘ಜಿಲ್ಲಾ ಕಾಂಗ್ರೆಸ್‌ನ ಪರಿಸ್ಥಿತಿಯೂ ಜೆಡಿಎಸ್‌ಗಿಂತ ಭಿನ್ನವಾಗಿಲ್ಲ. ಯಾವೊಬ್ಬ ಶಾಸಕರು ಜಿಲ್ಲಾ ಘಟಕಕ್ಕೆ ಕಿಮ್ಮತ್ತು ನೀಡುವುದೇ ಇಲ್ಲ. ನಾಲ್ಕು ವರ್ಷದ ಅವಧಿಯಲ್ಲಿ ನಡೆದ ಲೋಕಸಭೆ ಚುನಾ ವಣೆ, ತಾಲ್ಲೂಕು– ಜಿಲ್ಲಾ ಪಂಚಾಯ್ತಿ ಚುನಾವಣೆ, ವಿಧಾನ ಪರಿಷತ್‌ ಚುನಾವಣೆಗಳಲ್ಲಿ ಪಕ್ಷ ಮುಖಭಂಗ ಅನುಭವಿಸಲು ಇದು ಒಂದು ಮುಖ್ಯ ಕಾರಣ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಜಿಲ್ಲಾ ಕಾಂಗ್ರೆಸ್‌ನ ಕಾರ್ಯಕರ್ತರೊಬ್ಬರು ತಿಳಿಸಿದರು.

‘ಯಾವೊಬ್ಬ ನಾಯಕ ಸಹ ಪಕ್ಷದ ವತಿಯಿಂದ ಚುನಾವಣೆ ನಡೆಸಲ್ಲ. ತಮ್ಮ ತಮ್ಮ ವೈಯಕ್ತಿಕ ಚುನಾವಣೆ ಮಾತ್ರ ನಡೆಸುತ್ತಾರೆ. ಶಾಸಕರು–ಸಚಿವರು ಸಹ ತಮ್ಮ ಮತಕ್ಷೇತ್ರಕ್ಕೆ ಸೀಮಿತಗೊಂಡ ಪರಿಣಾಮ ಇದುವರೆಗೆ ಜಿಲ್ಲೆಯಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಪಕ್ಷದ ಪರಾಭವಕ್ಕೆ ಪರೋಕ್ಷ ಕಾರಣ ರಾಗಿದ್ದಾರೆ’ ಎಂದೂ ಇದೇ ಕಾರ್ಯ ಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಶರಣಪ್ಪ ಸುಣಗಾರ ಬದಲಾವಣೆ ಬಳಿಕವೂ ಕಾಂಗ್ರೆಸ್ ಜಿಲ್ಲೆಯಲ್ಲಿ ಚೇತರಿಸಿಕೊಂಡಿಲ್ಲ. ಹಂಗಾಮಿ ಅಧ್ಯಕ್ಷ ರವಿಗೌಡ ಪಾಟೀಲಗೆ ಸೂಕ್ತ ಬೆಂಬಲವೂ ದೊರೆಯುತ್ತಿಲ್ಲ. ಸಂಘಟನೆಯ ಸಾಮರ್ಥ್ಯವೂ ಪ್ರದರ್ಶನಗೊಳ್ಳುತ್ತಿಲ್ಲ. ಪ್ರಬಲ ಸಮಾಜದ ಪ್ರಭಾವಿ ಮುಖಂಡರ ‘ಕೈ’ಗೆ ಜಿಲ್ಲಾ ಕಾಂಗ್ರೆಸ್‌ನ ಚುಕ್ಕಾಣಿ ನೀಡಬೇಕು’ ಎಂಬ ಹಕ್ಕೊತ್ತಾಯ ಚುನಾವಣಾ ವರ್ಷದಲ್ಲಿ ಕೇಳಿಬರುತ್ತಿದೆ ಎಂದು ತಿಳಿಸಿದರು.

ಸಂಘಟನೆಯ ಮಂತ್ರ: ಜಿಲ್ಲೆಯ ಕಾಂಗ್ರೆಸ್‌, ಜೆಡಿಎಸ್‌ನ ಉಸ್ತುವಾರಿ ಹೊಣೆ ಹೊತ್ತವರು ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಿಗೆ ಸಂಘಟನೆಯ ಮಂತ್ರ ಬೋಧಿಸಿದ್ದಾರೆ. ಜೂನ್‌ ಅಂತ್ಯ ದೊಳಗೆ ಬೂತ್‌ ಕಮಿಟಿ ರಚಿಸುವಂತೆ ಕಾಂಗ್ರೆಸ್‌ ವೀಕ್ಷಕ ಮಾಣಿಕ್ಯಂ ಟ್ಯಾಗೋರ್‌ ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ಸೂಚಿಸಿದ್ದರೆ, ಜುಲೈ ಅಂತ್ಯದೊಳಗೆ 20 ಅಂಗ ಘಟಕಗಳು ಸೇರಿದಂತೆ ಬೂತ್ ಸಮಿತಿ ರಚಿಸುವ ನಿರ್ಧಾರ ಜೆಡಿಎಸ್‌ ಉಸ್ತುವಾರಿಗಳದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.