ADVERTISEMENT

‘ಧಮ್‌’ ಇಲ್ಲದ್ದಕ್ಕೆ ಸಿ.ಎಂ ಸ್ಪರ್ಧೆಗೆ ಒತ್ತಾಯ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 12:04 IST
Last Updated 21 ಏಪ್ರಿಲ್ 2018, 12:04 IST

ವಿಜಯಪುರ: ‘ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಸ್ವಂತ ಬಲದ ಮೇಲೆ ಗೆಲ್ಲುವ ‘ಧಮ್‌’ ಇಲ್ಲ; ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮುಖಂಡ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಇಲ್ಲಿ ಲೇವಡಿ ಮಾಡಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಬಾದಾಮಿಗೆ ಬಂದರೆ ಯಾವ ಗಾಳಿಯೂ ಬೀಸುವುದಿಲ್ಲ. ರಾಜ್ಯದಲ್ಲಿರುವುದು ಬಿಜೆಪಿ, ಮೋದಿ–ಯಡಿಯೂರಪ್ಪ ಗಾಳಿ ಮಾತ್ರ’ ಎಂದರು.

‘ಹಿಂದೂ ದೇವರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಸೋಲು ಖಚಿತ. ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆದಿರುವುದು, ಹಿಂದೂ ವಿರೋಧಿ ಭಾವನೆ ತಾಳಿರುವ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಸೋಲುವ ಭಯದಿಂದ ಬನಶಂಕರಿ ದೇವಿಯ ಕಾಲಿಗೆರಗಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿಯೂ ಕೂಡ ಅವರ ಆಟ ನಡೆಯುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಬಸವಣ್ಣ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಅಂದಿದ್ದಾರೆ. ಆದರೆ ಮತಕ್ಕಾಗಿ ಈ ಹಿಂದೆ ದೇಶ ಒಡೆದ ಕಾಂಗ್ರೆಸ್ಸಿಗರು, ಇದೀಗ ಧರ್ಮ ಒಡೆಯಲು ಮುಂದಾಗಿದ್ದಾರೆ. ಹಿಂದೂ ಧರ್ಮ ಒಡೆಯಲು ಲಿಂಗಾಯತರು ಬಿಡುವುದಿಲ್ಲ’ ಎಂದು ಪರೋಕ್ಷವಾಗಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

‘ಯತ್ನಾಳ ಬಾಯಿ ಬೊಂಬಾಯಿ’

‘ಬಸನಗೌಡ ಪಾಟೀಲ ಯತ್ನಾಳ ಬಾಯಿ ಬೊಂಬಾಯಿ. ಅವರ ಮಾತುಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬಾದಾಮಿಯಿಂದ ಸ್ಪರ್ಧಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯ. ತಮಗೆ ಅನನುಕೂಲವಾಗಬಹುದು ಎಂದು, ಬಿಜೆಪಿ ಅಭ್ಯರ್ಥಿ ಈಗಲೇ ಟೀಕೆ ಮಾಡಲಾರಂಭಿಸಿದ್ದಾರೆ’ ಎಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್‌ ಅಭ್ಯರ್ಥಿ ಎಂ.ಬಿ.ಪಾಟೀಲ ತಿರುಗೇಟು ನೀಡಿದರು.

ಕಾಂಗ್ರೆಸ್‌ನಿಂದ ಪತಿ–ಪತ್ನಿ ನಾಮಪತ್ರ ಸಲ್ಲಿಕೆ

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಎಸ್‌.ಪಾಟೀಲ ಶುಕ್ರವಾರ ನಾಮಪತ್ರ ಸಲ್ಲಿಸಿದರೆ, ಇವರ ಪತ್ನಿ ಭಾಗ್ಯಶ್ರೀ ಎಸ್‌.ಪಾಟೀಲ ಸಹ ಅ‌‌‌‌‌ದೇ ಕ್ಷೇತ್ರದಿಂದ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.