ADVERTISEMENT

ಮನಗೂಳಿ ಸದಸ್ಯತ್ವ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 6:50 IST
Last Updated 8 ಜುಲೈ 2017, 6:50 IST

ಸಿಂದಗಿ: ಪುರಸಭೆ ಜಲ ಶುದ್ಧೀಕರಣ ಘಟಕದಲ್ಲಿ ಕೆಲಸ ಮಾಡುತ್ತಿರುವ ಖಾಜು ಭಾಗಪ್ಪ ಭಾವಿಮನಿ, ಭೀಮಣ್ಣ ಸಂಗಪ್ಪ ಕಟ್ಟಿಮನಿ ಇವರ ಮೇಲೆ ನಗರದ 16ನೇ ವಾರ್ಡ್ ಪುರಸಭೆ ಸದಸ್ಯ ಗುರುಪಾದ ಮನಗೂಳಿ ತಮ್ಮ ಸಹಚರರೊಂದಿಗೆ ಹಲ್ಲೆ ನಡೆಸಿದ್ದು, ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿ ನೂರಾರು ಪೌರ ಕಾರ್ಮಿಕರು ಶುಕ್ರವಾರ ಪುರಸಭೆ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.

ಪುರಸಭೆ ಎಲ್ಲ ಸಿಬ್ಬಂದಿ ತಮ್ಮ ಕಾರ್ಯ ಕಲಾಪಗಳನ್ನು ಸ್ಥಗಿತಗೊಳಿಸಿ ಕಾರ್ಯಾಲಯ ಎದುರು ಕುಳಿತು 16ನೇ ವಾರ್ಡ್ ಸದಸ್ಯ ಗುರುಪಾದ ಮನಗೂಳಿ ಅವರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಸಿಬ್ಬಂದಿ ಮಾತನಾಡಿ, ತಾವು ಕೆಲಸದಲ್ಲಿದ್ದ ಸಂದರ್ಭದಲ್ಲಿ ಸದಸ್ಯ ಮನಗೂಳಿ  ನಾಲ್ಕು ಜನರೊಂದಿಗೆ ಜಲಶುದ್ಧೀಕರಣ ಘಟಕಕ್ಕೆ ಬಂದು ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ADVERTISEMENT

ಸದಸ್ಯ ಮನಗೂಳಿ ಸದಸ್ಯತ್ವ ರದ್ದು ಆಗಿ ಅವರ ಸಹಚರರ ಮೇಲೆ ಕಾನೂನು ಕ್ರಮ ಜರುಗಿಸುವವರೆಗೆ ಎಲ್ಲ ಪೌರಕಾರ್ಮಿಕರು ಕಚೇರಿ ಕೆಲಸ, ನೈರ್ಮಲ್ಯೀಕರಣ ಹಾಗೂ ಕುಡಿಯುವ ನೀರು ಸರಬರಾಜು ಕೆಲಸವನ್ನು ಸ್ಥಗಿತಗೊಳಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಪೌರ ಕಾರ್ಮಿಕ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರಮೇಶ ಪಾಟೀಲ, ಜಿಲ್ಲಾ ಘಟಕದ ಖಜಾಂಚಿ ಅಬ್ಬಾಸಲಿ ಕಾಖಂಡಕಿ, ಅಭಿಷೇಕ ಪಾಂಡೆ, ಸುನೀಲಕುಮಾರ ಸಾಬೋಜಿ, ಬಿ.ಆರ್. ಹಿರೇಮನಿ, ಎಸ್.ಬಿ. ಗಂಜಿಹಾಳ, ಡಿ.ಎಸ್. ಆವರ್ಗೆ, ರೂಪಾ ಸಿಂಧೆ, ಪರಶುರಾಮ ಜವಳಗಿ, ಜಗೂ ದೊಡಮನಿ, ಮಾದೇವಿ ಬಡಿಗೇರ, ಎಸ್.ಎ. ಘತ್ತರಗಿ, ಸರೋಜಿನಿ ಬಸವ­ರಾಜ, ಸಾವಿತ್ರಿ ಬಿಸನಾಳ, ಮಲ್ಲಮ್ಮ ಹರಿಜನ, ಯಲ್ಲವ್ವ ಎಮ್ಮಿ, ರೇಣುಕಾ ಚೌರ, ದಯಾನಂದ ಕಲಬುರ್ಗಿ, ಡಿ.ಎಸ್.ಗೊಳಸಂಗಿ ಪಾಲ್ಗೊಂಡಿದ್ದರು.

ಅಪಾರ ಸಂಖ್ಯೆಯಲ್ಲಿ ಪೌರ ಮಹಿಳಾ ಕಾರ್ಮಿಕರು ಪೊರಕೆಯೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಕಾರರು ಪುರಸಭೆ ಮುಖ್ಯಾಧಿಕಾರಿ ರಮೇಶ ಇಮ್ಮನದ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.