ADVERTISEMENT

‘ಮಾನವ ವಿಕಾಸಕ್ಕೆ ಸಾಹಿತ್ಯ ರಹದಾರಿ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:34 IST
Last Updated 4 ಮಾರ್ಚ್ 2017, 6:34 IST

ವಿಜಯಪುರ: ಸಾಹಿತ್ಯ ಎಂಬುದು ಮಾನವನ ವಿಕಾಸಕ್ಕೆ ರಹದಾರಿಯಾಗಿದ್ದು, ಸಾಹಿತ್ಯದ ತತ್ವಾದರ್ಶಗಳನ್ನು ಮನಮುಟ್ಟಿ ಓದಿ ಅರ್ಥೈಸಿಕೊಂಡು ಜೀವನ ಪಥ ಸಾಗಿಸಬೇಕು ಎಂದು ವಕೀಲ ಕೆ.ಎಫ್.ಅಂಕಲಗಿ ಹೇಳಿದರು.

ನಗರದಲ್ಲಿ ನ್ಯೂ ಚಾಣಕ್ಯ ಕರಿಯರ್ ಅಕಾಡೆಮಿ ಕೇಂದ್ರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ದಿ. ನೀಲಮ್ಮ ಸಂಕಣ್ಣವರ ಹಾಗೂ ಶಂಕರಾನಂದ ಉತ್ಲಾಸರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೃಜನಶೀಲ ಸಾಹಿತ್ಯ ಮನಸ್ಸು ಅರಳಿಸುವ ಕಾರ್ಯ ಮಾಡುವುದಲ್ಲದೆ ಬದುಕಿನ ಮರ್ಮವನ್ನು ತಿಳಿಸಿ ಸನ್ಮಾರ್ಗ ದತ್ತ ನಡೆಯಲು ಪೂರಕವಾಗಿದೆ ಎಂದರು.

ಸಿಕ್ಯಾಬ್ ಎ.ಆರ್.ಎಸ್.ಐ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಮೇತ್ರಿ, ವಚನ ಸಾಹಿತ್ಯದ ಬೆಳಕು ಪ್ರತಿಯೊಂದು ರಂಗ ದಲ್ಲೂ ಬೆಳಕು ಚೆಲ್ಲುತ್ತದೆ ಎಂದರು.

ನೂತನ ಚಾಣಕ್ಯ ಕರಿಯರ್ ಅಕಾಡೆಮಿ ಮುಖ್ಯಸ್ಥ ಪ್ರೊ.ಬಿ.ಡಿ. ಪಾಟೀಲ ಮಾತನಾಡಿ, ಯುವಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮತನ ಉಳಿಸಿಕೊಳ್ಳು ವುದರ ಜೊತೆಗೆ ಸಮಯ ವ್ಯರ್ಥ ಮಾಡದೆ ಸಾಹಿತ್ಯ ಗೀಳು ಹೆಚ್ಚಿಸಿಕೊಳ್ಳ ಬೇಕು ಎಂದು ಹೇಳಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಪ್ರೊ. ಯು.ಎನ್. ಕುಂಟೋಜಿ, ಶಶಿಧರ ಸಂಕಣ್ಣವರ, ಶ್ರೀದೇವಿ ಉತ್ಲಾಸರ, ಮಹಾಂತೇಶ ಮಾವೂರ, ಬನುದೇವಿ ಸಂಕಣ್ಣವರ ಭಾಗವಹಿಸಿದ್ದರು. ಶರಣಗೌಡ ಪಾಟೀಲ ಸ್ವಾಗತಿಸಿದರು. ಪ್ರೊ.ಬಸವರಾಜ ಕುಂಬಾರ ನಿರೂಪಿಸಿ, ಕಬೂಲ್ ಕೊಕಟನೂರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.