ADVERTISEMENT

ರಾಷ್ಟ್ರ ಮಟ್ಟದ ಕುಸ್ತಿ ನಾಳೆಯಿಂದ

ಚಿಕ್ಕಪಡಸಲಗಿ ಬ್ಯಾರೇಜ್‌ ರಜತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 5:54 IST
Last Updated 29 ಜನವರಿ 2015, 5:54 IST

ಜಮಖಂಡಿ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಚಿಕ್ಕಪಡಸಲಗಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಿದ ಬ್ಯಾರೇಜ್‌ನ ರಜತ ಮಹೋತ್ಸವ ಅಂಗವಾಗಿ ಕೃಷ್ಣಾ ತೀರ ರೈತ ಸಂಘ ಇಲ್ಲಿನ ತಾಲ್ಲೂಕು ಕ್ರೀಡಾಂಗ­ಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮ­ಟ್ಟದ ಕುಸ್ತಿ ಇದೇ 30ರಿಂದ ಫೆಬ್ರುವರಿ 2ರ ವರೆಗೆ ನಡೆಯಲಿದೆ.

‘ರಾಜ್ಯ ಮಣ್ಣಿನ ಕುಸ್ತಿ ಸಂಘ ಹಾಗೂ ಭಾರತೀಯ ಶೈಲಿ ಕುಸ್ತಿ ಸಂಘದ ಸಹಯೋ­ಗದಲ್ಲಿ ನಡೆಯಲಿರುವ ಪಂದ್ಯಾವಳಿಯ ಪುರು­ಷರ ವಿಭಾಗದಲ್ಲಿ ಹಿಂದ್‌ ಕೇಸರಿ ಹೆಸರಿನಲ್ಲಿ ಮುಕ್ತ ಸ್ಪರ್ಧೆ ಪ್ರಮುಖ ಆಕರ್ಷಣೆ’ ಎಂದು ರಾಜ್ಯ ಮಣ್ಣಿನ ಕುಸ್ತಿ ಸಂಘದ ಅಧ್ಯಕ್ಷ ರತನ್‌ ಕುಮಾರ್‌ ಮಠಪತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಭಾರತ್‌ ಕುಮಾರ್‌ ಪ್ರಶಸ್ತಿಗಾಗಿ 85 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಕೃಷ್ಣಾತೀರ ರೈತ ಸಂಘ ಕೇಸರಿ ಪ್ರಶಸ್ತಿಗಾಗಿ 75 ಕೆ.ಜಿ, 55 ಕೆ.ಜಿ, 61 ಕೆ.ಜಿ, 67 ಕೆ.ಜಿ ಹಾಗೂ 97 ಕೆ.ಜಿ ವಿಭಾಗಗಳಲ್ಲಿ ಸ್ಪರ್ಧೆಗಳು  ಇರುತ್ತವೆ. ಭಾರತ್‌ ಕುಮಾರ್‌ ಪ್ರಶಸ್ತಿಗಾಗಿ 85 ಕೆ.ಜಿ ವಿಭಾಗದಲ್ಲಿ ನಡೆಯುವ ಸ್ಪರ್ಧೆಯ ವಿಜೇತರಿಗೆ ₹75 ಸಾವಿರ, ದ್ವಿತೀಯ ಬಹುಮಾನವಾಗಿ ₹40 ಸಾವಿರ, ತೃತೀಯ ₹25 ಸಾವಿರ ಹಾಗೂ ನಾಲ್ಕನೇ ಬಹುಮಾನವಾಗಿ ₹20 ಸಾವಿರ ನಗದು ಬಹುಮಾನ ನೀಡಲಾಗುವುದು.

ಕೃಷ್ಣಾ ತೀರ ರೈತ ಸಂಘ ಕೇಸರಿ ವಿಭಾಗದ ಸ್ಪರ್ಧೆಗಳ ವಿಜೇತರಿಗೆ ತಲಾ ₹35 ಸಾವಿರ, ₹25 ಸಾವಿರ, ₹15 ಸಾವಿರ ಹಾಗೂ ₹10 ಸಾವಿರ ನಗದು ಬಹುಮಾನ ನೀಡಲಾಗುವುದು. ಪುರುಷರ 55 ಕೆ.ಜಿ, 61 ಕೆ.ಜಿ, 67 ಕೆ.ಜಿ, 97 ಕೆ.ಜಿ ವಿಭಾಗದ ಸ್ಪರ್ಧೆಗಳಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸುವವರಿಗೆ ತಲಾ ₹15 ಸಾವಿರ, ₹10 ಸಾವಿರ, ₹8 ಸಾವಿರ ಹಾಗೂ ₹5 ಸಾವಿರ ನಗದು ಸಿಗಲಿದೆ’ ಎಂದು ಅವರು ವಿವರಿಸಿದರು.

‘ಮಹಿಳಾ ಹಿಂದ್‌ ಕೇಸರಿ ವಿಜೇತರಿಗೆ ₹51 ಸಾವಿರ, ದ್ವಿತೀಯ ಸ್ಥಾನ ಗಳಿಸುವವರಿಗೆ ₹25 ಸಾವಿರ, ತೃತೀಯ ₹10 ಸಾವಿರ, ನಾಲ್ಕನೇ ಬಹುಮಾನವಾಗಿ ₹8 ಸಾವಿರ ಸಿಗಲಿದೆ. 45 ಕೆ.ಜಿ, 50 ಕೆ.ಜಿ, 56 ಕೆ.ಜಿ ಮತ್ತು 63 ಕೆ.ಜಿ ವಿಭಾಗಗಳಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವವರಿಗೆ ತಲಾ ₹12 ಸಾವಿರ, ₹8 ಸಾವಿರ, ₹6 ಸಾವಿರ ಹಾಗೂ ₹4 ಸಾವಿರ ಸಿಗಲಿದೆ’ ಎಂದು ತಿಳಿಸಿದರು.

‘ರಾಜಸ್ತಾನ, ಜಾರ್ಖಂಡ್‌, ಮಧ್ಯಪ್ರದೇಶ, ದೆಹಲಿ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಹಾರಾಷ್ಟ್ರ, ಭಾರತೀಯ ನೌಕಾದಳ, ಭಾರತೀಯ ವಾಯುಸೇನೆ, ಎಸ್‌ಎಸ್‌ಪಿಬಿ ತಂಡಗಳು ಪಾಲ್ಗೊಳ್ಳಲಿವೆ. ಹಿಂದ್‌ ಕೇಸರಿ ಮತ್ತು ಭಾರತ ಕೇಸರಿ ಪ್ರಶಸ್ತಿ ಪುರಸ್ಕೃತ ಹರಿಯಾಣದ ಹಿತೇಶ್‌, ದೆಹಲಿಯ ಪರವೇಶ್‌ ಕುಮಾರ್‌, ಮಹಾರಾಷ್ಟ್ರದ ಸುನಿಲ್‌ ಸಾಳುಂಕೆ, ಪಂಜಾಬ್‌ನ ಕೃಷ್ಣಕುಮಾರ ಸೇರಿದಂತೆ ಪುರುಷರ ವಿಭಾಗದಲ್ಲಿ ಸುಮಾರು 300 ಹಾಗೂ ಮಹಿಳೆಯರ ವಿಭಾಗದಲ್ಲಿ 150 ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

‘ಭಾರತದಲ್ಲಿ 1997ರಲ್ಲಿ ಮಹಿಳಾ ಕುಸ್ತಿ ಸ್ಪರ್ಧೆಗಳು ಆರಂಭವಾದ ಬಳಿಕ ಮೂರು ಬಾರಿ ರಾಷ್ಟ್ರಮಟ್ಟದ ಮಹಿಳಾ ಕುಸ್ತಿ ನಡೆದಿದೆ. ಜಮಖಂಡಿಯಲ್ಲಿ ಜರುಗುತ್ತಿರುವುದು ನಾಲ್ಕನೇ ಪಂದ್ಯಾವಳಿ. 29ರಂದು ಕುಸ್ತಿಪಟುಗಳ ತೂಕ ಪಡೆಯುವುದು ಹಾಗೂ ವೈದ್ಯಕೀಯ ತಪಾಸಣೆ ನಡೆಯಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.