ADVERTISEMENT

ವಿದ್ಯಾರ್ಥಿ ಡಿಬಾರ್; ಕೊಠಡಿ ಮೇಲ್ವಿಚಾರಕ ಅಮಾನತು

ಶಿರೋಳದಲ್ಲಿ ಎಸ್.ಎಸ್.ಎಲ್.ಸಿ. ಪ್ರಶ್ನೆ ಪತ್ರಿಕೆ ಬಹಿರಂಗ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:37 IST
Last Updated 24 ಮಾರ್ಚ್ 2018, 12:37 IST

ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ಭಾಷಾ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ.

ಇದಕ್ಕೆ ಕಾರಣನಾದ ವಿದ್ಯಾರ್ಥಿ ಪ್ರಶಾಂತ ಗಿರೀಶ ಹಡಪದ ಎಂಬಾತನನ್ನು ಡಿಬಾರ್‌ ಮಾಡಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಚಿರ್ಚಿನಕಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ, ಕೊಠಡಿ ಮೇಲ್ವಿಚಾರಕ ಎಚ್‌.ಬಿ.ಲಮಾಣಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ಪ್ರಹ್ಲಾದ ಟಿ.ಬೊಂಗಾಳೆ ಮಾಹಿತಿ ನೀಡಿದ್ದಾರೆ.

‘ಶಿರೋಳ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಭಾಷಾ ಪರೀಕ್ಷೆಗೆ ಹಾಜರಾಗಿದ್ದ ವಿಬಿಸಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಶಾಂತ ಗಿರೀಶ ಹಡಪದ ಎಂಬಾತ, ಕೊಠಡಿಯೊಳಗಿನಿಂದ ಕಿಟಕಿಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನಿಗೆ ತನ್ನ ಬಳಿಯಿದ್ದ ಪ್ರಶ್ನೆ ಪತ್ರಿಕೆ ನೀಡಿದ್ದಾನೆ.

ADVERTISEMENT

ಪ್ರಶ್ನೆಪತ್ರಿಕೆ ಪಡೆದ ಅನಾಮಧೇಯ ಮೊಬೈಲ್‌ನಲ್ಲಿ ಅದರ ಫೋಟೊ ತೆಗೆದುಕೊಂಡು ವಾಟ್ಸ್‌ಆ್ಯಪ್‌ ಮೂಲಕ ಬಹಿರಂಗಗೊಳಿಸಿದ್ದಾನೆ. ಇದು ಖಚಿತಪಟ್ಟಿದ್ದು, ಆತನಿಗಾಗಿ ಶೋಧ ನಡೆದಿಧೆ. ಪ್ರಶಾಂತ ತಾನು ಯಾರ ಕೈಗೆ ಪ್ರಶ್ನೆ ಪತ್ರಿಕೆ ನೀಡಿದ್ದೇನೆ ಎಂಬ ವಿವರ ನೀಡದ ಕಾರಣ ಪೊಲೀಸ್‌ ಕಸ್ಟಡಿಗೆ ವಿದ್ಯಾರ್ಥಿಯನ್ನು ನೀಡಲಾಗಿದೆ’ ಎಂದು ಡಿಡಿಪಿಐ ತಿಳಿಸಿದರು.

‘ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಪಾಲಕರಾದ ಮುದ್ದೇಬಿಹಾಳ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್.ನಾಯಕ ಅವರನ್ನು ಪರೀಕ್ಷಾ ಕಾರ್ಯದಿಂದ ಬಿಡುಗಡೆಗೊಳಿಸಲಾಗಿದೆ.

ಸ್ಥಾನಿಕ ಜಾಗೃತದಳದ ಅಧಿಕಾರಿ, ಲಿಂಗದಳ್ಳಿ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಈ.ಬಿ.ಸಜ್ಜನ ಅವರಿಗೆ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾದ ಎಂ.ಬಿ.ಮುದ್ದೇಬಿಹಾಳ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಧಾರವಾಡ ವಲಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಶಿಫಾರಸು ಮಾಡಲಾಗುವುದು’ ಎಂದು ಪಿ.ಟಿ.ಬೊಂಗಾಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.