ADVERTISEMENT

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 6:02 IST
Last Updated 28 ನವೆಂಬರ್ 2014, 6:02 IST

ವಿಜಯಪುರ: ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಗುರುವಾರ ಚಾಲನೆ ನೀಡಿದರು.
ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರದ ಹೊಸೂರ ಗ್ರಾ.ಪಂ. ರಸ್ತೆ ಕಾಮಗಾರಿ (₨ 24 ಲಕ್ಷ), ನಾರಾಯಣ-ಶಿರಬೂರ ವಸ್ತಿ (₨35 ಲಕ್ಷ), ಕೃಷ್ಣಾ ಭಾಗ್ಯ ಜಲ ನಿಗಮ ಅಚ್ಚುಕಟ್ಟು ರಸ್ತೆ ಕಾಮಗಾರಿಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಸಚಿವರು, ಬಬಲೇಶ್ವರ-–ಯರಗಟ್ಟಿ ರಾಜ್ಯ ಹೆದ್ದಾರಿಯನ್ನು ಬಬಲೇಶ್ವರದಿಂದ ಗಲಗಲಿವರೆಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಪ್ರಥಮ ಹಂತದಲ್ಲಿ ಹಲಗಣಿ–-ಗುಣದಾಳವರೆಗೆ ₨ 17 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಈ ಕಾಮಗಾರಿ ಅಂತಿಮ ಹಂತದಲ್ಲಿದೆ. ಗುಣದಾಳ–-ಬಬಲಾದ ಕ್ರಾಸ್‌ವರೆಗೆ ₨ 6 ಕೋಟಿ ವೆಚ್ವದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಬಬಲಾದ ಕ್ರಾಸ್‌ನಿಂದ ಗಲಗಲಿವರೆಗೆ ಜಲಸಂಪನ್ಮೂಲ ಇಲಾಖೆಯಿಂದ ₨ 25 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು.

ಬಸ್ ಸಂಚಾರಕ್ಕೆ ಚಾಲನೆ: ವಿಜಯಪುರ-–ಗಲಗಲಿ ನೇರ ಬಸ್ ಸಂಚಾರ ಸೌಲಭ್ಯಕ್ಕೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ ಅದೇ ಬಸ್‌ನಲ್ಲಿ ಪ್ರಯಾಣಿಸುವ ಜತೆಗೆ ಪ್ರಯಾಣಿಕರಿಂದ ಅಹವಾಲು ಸ್ವೀಕರಿಸಿದರು. ನಂತರ ಗಲಗಲಿ ಹತ್ತಿರದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಹಲಗಣಿ-–ಕಾಖಂಡಕಿ ರಸ್ತೆ: ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಹಲಗಣಿ-–ಕಾಖಂಡಕಿ (₨ 51 ಲಕ್ಷ), ಕಿಲಾರಹಟ್ಟಿ–-ಮಮದಾಪುರ (₨ 1.36 ಕೋಟಿ) ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಎಂ.ಬಿ.ಪಾಟೀಲ, ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳಿಂದ ಆ ಭಾಗದಲ್ಲಿ ಬರುವ ತೋಟಗಳಿಗೆ ತೆರಳುವ ರೈತರಿಗೆ ಸುಗಮ ಸಂಚಾರ ಕಲ್ಪಿಸಿದಂತಾಗುತ್ತದೆ ಎಂದರು.

ಜಿ.ಪಂ. ಅಧ್ಯಕ್ಷ ಉಮೇಶ ಕೋಳಕೂರ, ಸದಸ್ಯ ಬಾಪುಗೌಡ ಪಾಟೀಲ ಶೇಗುಣಸಿ, ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ವಿ.ಎಸ್.ಪಾಟೀಲ, ಬಂಡುರಾವ ಕುಲಕರ್ಣಿ, ಕೃಷ್ಣ ಕುಲಕರ್ಣಿ, ಸಂಗಮೇಶ ಬಬಲೇಶ್ವರ, ಹನಮಂತಗೌಡ ಪಾಟೀಲ, ಮಲ್ಲಪ್ಪ ಲಕ್ಷಾನಟ್ಟಿ, ಶ್ರೀಶೈಲ ಹೆಬ್ಬಾಳಹಟ್ಟಿ, ಶ್ರೀಶೈಲ ಜೈನಾಪುರ, ಭೀಮಪ್ಪ ಹರಿಜನ, ಧೂಳಪ್ಪ ಮಾದರ, ಧರ್ಮಣ್ಣ ದಳವಾಯಿ, ನಾಗು ಹೊಳೆಪ್ಪಗೋಳ, ಅನಿಲ ಬಿರಾದಾರ, ಕಿಲಾರಹಟ್ಟಿ ಗ್ರಾಮದ ಆನಂದ ಖರಾತ, ತಾಯಪ್ಪ ಹುಸೇನ, ಲಕ್ಷ್ಮಣ ದರಗುಡೆ, ಜಾನು ಸಿಂಧೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.