ADVERTISEMENT

ವೀರಶೈವ ಲಿಂಗಾಯತ ಒಂದೇ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 10:37 IST
Last Updated 20 ನವೆಂಬರ್ 2017, 10:37 IST

ವಿಜಯಪುರ: ‘ವೀರಶೈವ ಲಿಂಗಾಯತ ಒಂದೇ. ಬೇರೆ ಬೇರೆ ಎಂಬುದಿಲ್ಲ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ತಿಳಿಸಿದರು. ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ, ವಿಚಾರಗೋಷ್ಠಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಸ್ವಾಮೀಜಿ, ‘ವೀರಶೈವ ಲಿಂಗಾಯತ ಬೇರೆ, ಬೇರೆ ಎಂದು ಕೆಲವರು ಕಲುಷಿತ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಂದ ಸಮಾಜ ಜಾಗೃತವಾಗಿರಬೇಕು’ ಎಂದು ಕಿವಿಮಾತು ಹೇಳಿದರು.

‘ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಇಂದಿನ ದಿನಗಳಲ್ಲಿ ವಿವಾಹ ಸಮಾರಂಭಕ್ಕಾಗಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಖರ್ಚು ಮಾಡುವುದನ್ನು ಕಾಣುತ್ತೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸರಳ, ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದರು.

‘ಮಾನವ ಜನ್ಮ ಅತ್ಯಂತ ಅಮೂಲ್ಯ. ಬದುಕಿನ ಉಜ್ವಲತೆಗೆ ಧರ್ಮ ಪ್ರಜ್ಞೆ ಅತ್ಯಂತ ಅವಶ್ಯ. ಯುವ ಜನರಿಗೆ ಉದಾತ್ತವಾದ ಸಂಸ್ಕಾರ, ಸೂಕ್ತ ಮಾರ್ಗದರ್ಶನ ನೀಡಿದರೆ, ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ವಿಶೇಷವಾಗಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ, ಶ್ರದ್ಧೆ ಬೆಳೆಸುವ ಕೆಲಸ ಆದ್ಯತೆ ಮೇರೆಗೆ ನಡೆಯಬೇಕಿದೆ’ ಎಂದು ಸ್ವಾಮೀಜಿ ಆಶಿಸಿದರು.

ADVERTISEMENT

‘ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸಿರುವುದು ಅರ್ಥಪೂರ್ಣವಾದ ಸಾಮಾಜಿಕ ಕಾರ್ಯ. ಪವಿತ್ರವಾದ ಗೃಹಸ್ಥಾಶ್ರಮ ಪ್ರವೇಶಿಸಿದ ನೂತನ ಸತಿ-ಪತಿ ತಮ್ಮ ಜೀವನದಲ್ಲಿ ಪ್ರೀತಿ, ವಿಶ್ವಾಸ, ಅನ್ಯೋನ್ಯತೆಯಿಂದ ಬದುಕಬೇಕು. ಆಗ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದು ಕಿವಿಮಾತು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು ಆಶೀವರ್ಚನ ನೀಡಿ ‘ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಬಾರದು. ನಮ್ಮ ನೆಲದ ಸಂಸ್ಕೃತಿಯಂತೆ ಬಾಳಬೇಕು. ಮಾತೃಭಾಷೆಯಾದ ಕನ್ನಡ ಉಳಿಸಿ, ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕು’ ಎಂದು ಸಲಹೆ ನೀಡಿದರು. ದೇವರಹಿಪ್ಪರಗಿಯ ಜಡೆಸಿದ್ಧೇಶ್ವರ ಶಿವಾಚಾರ್ಯರು, ನಾಗಠಾಣದ ಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಕೋಡತಗೇರಿ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ, ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ವಡ್ಡರ, ಶರಣು ಪೂಜಾರಿ, ರಾಜು ಬೆನಕನಹಳ್ಳಿ, ಜಯಶ್ರೀ ಲದ್ವಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

* * 

ಧರ್ಮ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಸಮಾಜ ವಿಶೇಷ ಆದ್ಯತೆ ನೀಡಿದೆ. ಉತ್ತಮ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ವೀರಸೋಮೇಶ್ವರ ಶಿವಾಚಾರ್ಯ
ರಂಭಾಪುರಿ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.