ADVERTISEMENT

ಸದ್ದಿಲ್ಲದೆ ನಡೆದಿದೆ ಗುಂಟಾ ನೋಂದಣಿ!

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:04 IST
Last Updated 20 ಮೇ 2017, 5:04 IST

ವಿಜಯಪುರ: ವಿಧಾನಸಭಾ ಚುನಾವಣಾ ವರ್ಷ ಆರಂಭಗೊಳ್ಳುತ್ತಿದ್ದಂತೆ, ಮೂರ್ನಾಲ್ಕು ವರ್ಷಗಳಿಂದ ನಿಷೇಧಗೊಂಡಿದ್ದ ‘ಗುಂಟಾ’ ನೋಂದಣಿ ಪ್ರಕ್ರಿಯೆ ಕಳೆದ ವಾರದಿಂದ ವಿಜಯಪುರ ತಹಶೀಲ್ದಾರ್ ಕಚೇರಿಯಲ್ಲಿ ಚಾಲನೆ ಪಡೆದಿದೆ.

ಉತಾರೆದಲ್ಲಿ ಗುಂಟಾ ನಮೂದಿಸಲು ತಹಶೀಲ್ದಾರ್‌ ಕಚೇರಿಯಲ್ಲಿ ರಾಜಾರೋಷವಾಗಿ ಒಂದಕ್ಕೆ ₹ 15,000 ಪಡೆಯಲಾಗುತ್ತಿದೆ. ಖರೀದಿದಾರರು ಸಹ ಸಿಬ್ಬಂದಿ ಕೇಳಿದ ಮೊತ್ತ ನೀಡಿ ತಮ್ಮ ಹೆಸರು ಸೇರ್ಪಡೆಗೆ ಮುಗಿ ಬೀಳುತ್ತಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ.

‘ನೋಂದಣಿ ಪ್ರಕ್ರಿಯೆ ಆರಂಭಗೊಂಡ ದಿನದಿಂದ ಇಲ್ಲಿವರೆಗೂ ಕನಿಷ್ಠ 400ರಿಂದ 500 ಹೆಸರನ್ನು ಉತಾರೆಗೆ ಸೇರಿಸಲಾಗಿದೆ. ಈ ಎಲ್ಲ ಹೆಸರು ಒಂದೇ ಜನಾಂಗಕ್ಕೆ ಸೇರಿದವು’ ಎಂದು ತಹಶೀಲ್ದಾರ್‌ ಕಚೇರಿಯ ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ADVERTISEMENT

‘ಜಿಲ್ಲಾ ಕೇಂದ್ರದಲ್ಲಿರುವ ತಹಶೀಲ್ದಾರ್‌ ಕಚೇರಿಯಲ್ಲೇ ವ್ಯಾಪಕ ಪ್ರಮಾಣದಲ್ಲಿ ಅಕ್ರಮವಾಗಿ ನೋಂದಣಿ ನಡೆಯುತ್ತಿದ್ದರೂ, ಜಿಲ್ಲಾಡಳಿತ ಮೌನ ವಹಿಸಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಈ ಕುರಿತು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದೇವೆ.

ಈ ಹಿಂದೆ ಯಾವ ಕಾರಣಕ್ಕಾಗಿ ಗುಂಟಾ ನೋಂದಣಿ ನಿಷೇಧಿಸಲಾಗಿತ್ತು. ಇದೀಗ ಯಾವ ಉದ್ದೇಶದಿಂದ ಮತ್ತೆ ಸದ್ದಿಲ್ಲದೆ ನೋಂದಣಿ ಪುನರಾರಂಭಿಸಲಾಗಿದೆ. ಎಷ್ಟು ನೋಂದಣಿ ನಡೆದಿದೆ ಎಂಬ ಮಾಹಿತಿ ಕೋರಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಬೆಂಬಲಿಗರ ಮೂಲಕ ಅರ್ಜಿ ಸಲ್ಲಿಸಿದ್ದೇವೆ. ಉತ್ತರ ದೊರೆತ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಅಧಿಕಾರದ ಚುಕ್ಕಾಣಿ ಹಿಡಿದ ಕೆಲ ದಿನಗಳಲ್ಲೇ ಗುಂಟಾ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಜಿಲ್ಲಾಡಳಿತಕ್ಕೆ ಖಡಕ್‌ ಆದೇಶ ಹೊರಡಿಸಿದ್ದರು. ಇದರಂತೆ ಜಿಲ್ಲೆಯ ಎಲ್ಲೆಡೆ ಗುಂಟಾ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ಇದೀಗ ಮರು ಚಾಲನೆ ನೀಡಿರುವುದು ಹಲವು ಅನುಮಾನ ಸೃಷ್ಟಿಸಿದೆ. ಒಂದೆಡೆ ಬಡ ಮತದಾರರನ್ನು ಸೆಳೆಯುವ ಕಸರತ್ತಿದ್ದರೆ, ಇನ್ನೊಂದೆಡೆ ತಮ್ಮ ಪ್ರಭಾವ ಬಳಸಿ ಅಧಿಕಾರಿಗಳ ಮೂಲಕ ಮುಂಬರುವ ಚುನಾವಣೆಗೆ ಹಣ ಸಂಗ್ರಹಣೆಯ ಮಾರ್ಗವಾಗಿ ಗುಂಟಾ ನೋಂದಣಿ ಬಳಸಿಕೊಳ್ಳಲಾಗುತ್ತಿದೆ’ ಎಂದು ನೋಂದಣಿ ಪ್ರಕ್ರಿಯೆಯಲ್ಲಿ ನಿತ್ಯವೂ ಭಾಗಿಯಾಗುವ ಮಧ್ಯವರ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಟಾ ನೋಂದಣಿ ಪ್ರಕ್ರಿಯೆ ಮರು ಜೀವ ಪಡೆದಿರುವುದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದರೂ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ. ಈ ಅಕ್ರಮದಲ್ಲಿ ಇವರಿಬ್ಬರೂ ಪಾಲುದಾರರಾಗಿದ್ದಾರಾ ? ಎಂಬ ಅನುಮಾನ ಬೆಂಬಿಡದೆ ಕಾಡುತ್ತಿದೆ.

ನಗರ ಶಾಸಕರ ಕುಮ್ಮಕ್ಕಿನಿಂದಲೇ ತಹಶೀಲ್ದಾರ್‌ ಕಚೇರಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಗುಂಟಾ ನೋಂದಣಿ ನಡೆದಿದೆ. ಸಚಿವರು, ಜಿಲ್ಲಾಧಿಕಾರಿ ಎಲ್ಲವೂ ತಿಳಿದಿದ್ದರೂ, ಜಾಣ ಕುರುಡುತನ–ಕಿವುಡುತನ ಪ್ರದರ್ಶಿಸುತ್ತಿದ್ದಾರೆ’ ಎಂದು ಅವರು ದೂರಿದರು.

ಗುಂಟಾದಿಂದ ನಷ್ಟ: ‘ಗುಂಟಾ ನೋಂದಣಿ ಪ್ರಕ್ರಿಯೆ ತಹಶೀಲ್ದಾರ್‌ ಕಚೇರಿಯಲ್ಲಿ ನಡೆಯುತ್ತದೆ. ಈ ಭೂಮಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಗುವುದಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ಬರುವ ವರಮಾನ ತಪ್ಪುತ್ತದೆ.

ಇನ್ನೂ ಒಂದು ಗುಂಟಾ ಖರೀದಿಸುವ ಖರೀದಿದಾರ ಅಲ್ಲಿ ಯಾವ ಕೃಷಿ ಮಾಡಲು ಸಾಧ್ಯವಿರುವುದಿಲ್ಲ. ಈ ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುತ್ತಾನೆ. ಬಳಿಕ ನಮಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಪ್ರತಿಭಟನೆಗಿಳಿಯುತ್ತಾನೆ.

ಇದರಿಂದ ಅನಿವಾರ್ಯವಾಗಿ, ವೋಟಿನಾಸೆಗಾಗಿ ಆ ಭಾಗದ ಜನಪ್ರತಿನಿಧಿ ಸರ್ಕಾರದ ದುಡ್ಡಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮುಂದಾಗುತ್ತಾರೆ. ಎರಡೂ ಕಡೆಯಿಂದಲೂ ಸರ್ಕಾರಕ್ಕೆ ಗುಂಟಾ ನೋಂದಣಿ ನಷ್ಟವಾಗಿ ಕಾಡುತ್ತದೆ.

ಇನ್ನೂ ಕೆಲವೊಂದು ಸಂದರ್ಭ ಭೂಮಿಯ ಮಾಲೀಕ ಬಡ ಖರೀದಿದಾರರಿಗೆ ವಂಚಿಸುವ ಸಾಧ್ಯತೆ ಹೆಚ್ಚಿರುತ್ತದೆ. ಭೂಮಿ ನೋಂದಣಿಯಾಗದಿರುವುದರಿಂದ ಎಲ್ಲೂ ಅಧಿಕೃತ ದಾಖಲೆ ದೊರಕಲ್ಲ. ತನ್ನ ಉತಾರೆಯೇ ಎಲ್ಲರಿಗೂ ದಾಖಲೆ ಆಗಿರುತ್ತದೆ.

ಇದನ್ನೇ ಮೋಸದ ತಂತ್ರವನ್ನಾಗಿಸಿಕೊಳ್ಳುವ ಮಾಲೀಕ ಒಂದು ಗುಂಟೆ ಜಮೀನನ್ನು ಮೂರ್ನಾಲ್ಕು ಮಂದಿಗೆ ಮಾರಾಟ ಮಾಡಿ ವಂಚಿಸಿರುವ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಗುಂಟಾ ನೋಂದಣಿ ಮಾರಾಟಗಾರನನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ತ್ರಾಸು ನೀಡುವಂತದ್ದು’ ಎಂದು ಈ ಪ್ರಕ್ರಿಯೆಗಳಲ್ಲಿ ಹಲ ವರ್ಷಗಳಿಂದ ತಲ್ಲೀನರಾಗಿರುವ ಶಂಕರ ಮಾಹಿತಿ ನೀಡಿದರು.

ಗುಂಟಾ ಲೇಔಟ್ ಮಾಡಲಾಗುತ್ತಿಲ್ಲ. ಮೃತಪಟ್ಟವರ ಹೆಸರಿನಲ್ಲಿನ ಗುಂಟಾ ಮಾಲೀಕತ್ವವನ್ನು ಅವರ ವಾರಸುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ
ಎಂ.ಎನ್‌.ಬಳಿಗಾರ
ವಿಜಯಪುರ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.