ADVERTISEMENT

ಹೆಸರು, ಉದ್ದು ಬೆಳೆಗಷ್ಟೇ ಹೊಡೆತ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 5:45 IST
Last Updated 14 ಸೆಪ್ಟೆಂಬರ್ 2017, 5:45 IST

ವಿಜಯಪುರ: ಈಚೆಗಿನ ಐದು ವರ್ಷದ ಅವಧಿಯಲ್ಲಿ ಜಿಲ್ಲೆಯ ಮುಂಗಾರು ಹಂಗಾಮಿನ ಚಿತ್ರಣ ಅಷ್ಟೇನೂ ಆಶಾದಾಯಕವಾಗಿಲ್ಲ. ಸಕಾಲಕ್ಕೆ ಮಳೆ ಸುರಿಯದ ಪರಿಣಾಮ ರೈತ ಸಮೂಹ ಬೆಳೆ ನಷ್ಟ ಅನುಭವಿಸಿದ್ದೇ ಹೆಚ್ಚು.

ಇದ್ದುದರಲ್ಲಿ ಪ್ರಸ್ತುತ ವರ್ಷವೇ ಕೊಂಚ ಉತ್ತಮ ಎನ್ನುವಂತಹ ವಾತಾವರಣ ಎಲ್ಲೆಡೆ ಗೋಚರಿಸುತ್ತಿದೆ. ಅದರಲ್ಲೂ 23000 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತಿದ್ದ ಮುಂಗಾರು ಬೆಳೆಗಳಾದ ಹೆಸರು, ಉದ್ದು ಮಳೆ ಅಭಾವ, ಕೀಟ ಬಾಧೆಯಿಂದ ಸಂಪೂರ್ಣ ನಾಶವಾಗಿ ರೈತರ ಕೈ ಸುಟ್ಟವು.

4.30 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಗೆ 4.42 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಮೂಲಕ ಕೃಷಿ ಇಲಾಖೆಯ ಶೇ 100ರ ಗುರಿ, ಶೇ 103ರಷ್ಟು ಸಾಧನೆಯಾಯ್ತು. ಇದಕ್ಕೆ ಜೂನ್‌, ಆಗಸ್ಟ್‌ನಲ್ಲಿ ಸುರಿದ ಮಳೆಯೇ ಪ್ರಮುಖ ಕಾರಣ ಎಂದು ಜಿಲ್ಲಾ ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ತಿಳಿಸಿದರು.

ADVERTISEMENT

ಮಳೆಯ ವಿವರ: ‘ಜಿಲ್ಲೆಯ ವಾಡಿಕೆ ಮಳೆ ಜೂನ್‌ನಲ್ಲಿ 8.92 ಸೆಂ.ಮೀ ಇದ್ದರೆ, ಜುಲೈನಲ್ಲಿ 8.66, ಆಗಸ್ಟ್‌ನಲ್ಲಿ 8.56, ಸೆಪ್ಟೆಂಬರ್‌ ನಲ್ಲಿ 11.66 ಸೆಂ.ಮೀ. ನಷ್ಟಿದೆ.
2013ರಿಂದ ಇಲ್ಲಿವರೆಗೂ ಯಾವೊಂದು ವರ್ಷವೂ ಸಮರ್ಪಕ ವಾಗಿ ವಾಡಿಕೆ ಮಳೆ ಸುರಿದಿಲ್ಲ. ಪ್ರತಿ ವರ್ಷವೂ ಒಂದಲ್ಲ ಒಂದು ತಿಂಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ರೈತ ರನ್ನು ನಿರಂತರವಾಗಿ ನಷ್ಟದ ಕೂಪಕ್ಕೆ ತಳ್ಳುತ್ತಿದೆ.

ಚೇತರಿಸಿಕೊಳ್ಳಲು ಅವಕಾಶ ಸಿಗದಾಗಿದೆ’ ಎಂದು ಬಿರಾದಾರ ಅಂಕಿ–ಅಂಶಗಳ ಮಾಹಿತಿ ನೀಡಿದರು. ‘2017ರಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಜೂನ್‌ನಲ್ಲಿ 12.09 ಸೆಂ.ಮೀ ವರ್ಷಧಾರೆಯಾಗಿದ್ದರೆ, ಜುಲೈನಲ್ಲಿ ಕೇವಲ 0.18 ಸೆಂ.ಮೀ ಮಳೆಯಾಗಿದೆ. ಜುಲೈನಲ್ಲಿನ ಕೊರತೆಯಿಂದಲೇ ಹೆಸರು, ಉದ್ದಿನ ಬೆಳೆ ಸಂಪೂರ್ಣ ನಾಶವಾಯ್ತು.

ಆಗಸ್ಟ್‌ನಲ್ಲಿ ವಾಡಿಕೆಗಿಂತ 2,4 ಸೆಂ.ಮೀ. ಹೆಚ್ಚಿನ ಮಳೆ ಸುರಿದಿದೆ. ಸೆ 8ರವರೆಗೂ 2.65 ಸೆಂ.ಮೀ. ವರ್ಷಧಾರೆಯಾಗಿದೆ. ಮೊದಲಾರ್ಧದಲ್ಲಿ ಹುಬ್ಬಿ ಮಳೆ ರೈತರ ಕೈ ಹಿಡಿದಿದ್ದು, ಇದೀಗ ಆರಂಭಗೊಂಡಿರುವ ‘ಉತ್ತರೆ’ ಮಳೆ ಸಹ ಜಿಲ್ಲೆಯ ವ್ಯಾಪ್ತಿಯಲ್ಲಿ ಚಲೋ ಸುರಿಯಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

‘ಉತ್ತರೆ’ ಮಳೆ ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲೆಡೆ ಚೆದುರಿದಂತೆ ಸುರಿದರೆ ಮಾತ್ರ ಹಿಂಗಾರು ಬಿತ್ತನೆಗೆ ಚುರುಕಿನ ಸಿದ್ಧತೆ ಆರಂಭಗೊಳ್ಳುತ್ತವೆ. ವ್ಯಾಪಕ ಪ್ರಮಾಣದಲ್ಲಿ ಬಿತ್ತನೆ ನಡೆಯಲಿದೆ. ಪ್ರಸ್ತುತ ಅವಧಿಯಲ್ಲಿ ಹಿಂಗಾರಿ ಜೋಳ, ಕಡಲೆ ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದ್ದು, ಬಿತ್ತನೆ ಬೀಜದ ದಾಸ್ತಾನನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘2016ರ ಜೂನ್‌ನಲ್ಲಿ 10.19, ಜುಲೈನಲ್ಲಿ 12.20, ಆಗಸ್ಟ್‌ನಲ್ಲಿ 3.15, ಸೆಪ್ಟೆಂಬರ್‌ನಲ್ಲಿ 12.77, 2015ರಲ್ಲಿ 3.89, 1.06, 5.75, 16.06, 2014 ರಲ್ಲಿ 3.38, 8.62, 17.19, 6.75, 2013ರಲ್ಲಿ 6.51, 11.58, 5.72, 20.85 ಸೆಂ.ಮೀ. ವರ್ಷಧಾರೆಯಾದ ದಾಖಲೆಯಿದೆ.

2013ರಲ್ಲಿ ಜೂನ್‌, ಆಗಸ್ಟ್‌ನಲ್ಲಿ ಮಳೆ ಕೈಕೊಟ್ಟು ಬೆಳೆ ಹಾನಿಗೊಳ ಪಟ್ಟರೇ, 2014ರಲ್ಲಿ ಜೂನ್‌, ಜುಲೈ, ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆಯೇ ಸುರಿಯಲಿಲ್ಲ. ಇನ್ನೂ 2015ರಲ್ಲಿ ಮುಂಗಾರು ಹಂಗಾಮು ಆರಂಭದ ಜೂನ್, ಜುಲೈ, ಆಗಸ್ಟ್‌ ತಿಂಗಳುಗಳಲ್ಲಿ ವಾಡಿಕೆ ಮಳೆ ಸುರಿಯದ ಪರಿಣಾಮ ನಿರೀಕ್ಷೆಯಂತೆ ಬಿತ್ತನೆಯೇ ನಡೆಯಲಿಲ್ಲ. 2016ರಲ್ಲಿ ಆಗಸ್ಟ್‌ನಲ್ಲಿ ಮಳೆ ಕೊರತೆಯಾದರೆ, ಪ್ರಸ್ತುತ ವರ್ಷ ಜುಲೈನಲ್ಲಿ ಮಳೆ ಕೊರತೆ ಕಾಡಿತು’ ಎಂದು ಎ.ಪಿ.ಬಿರಾದಾರ ಅಂಕಿ–ಅಂಶಗಳನ್ನು ‘ಪ್ರಜಾವಾಣಿ’ಗೆ ನೀಡಿದರು. ­

* * 

ಹೊಲದಲ್ಲಿ ಬಿತ್ತಿದ್ದ ಉದ್ದು, ಹೆಸರು ಸಕಾಲಕ್ಕೆ ಮಳೆಯಾಗದ ಕಾರಣ ನಾಶವಾಯ್ತು. ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ನಷ್ಟದ ಸಮೀಕ್ಷೆ ನಡೆಸಿಲ್ಲ. ಪರಿಹಾರ ಅನುಮಾನ
ರಾಜು ಹಬ್ಬು
ತಿಕೋಟಾ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.