ADVERTISEMENT

‘ಮೀಸಲಾತಿ ಹೆಸರಿನಲ್ಲಿ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 7:22 IST
Last Updated 8 ಫೆಬ್ರುವರಿ 2018, 7:22 IST

ಬಸವನಬಾಗೇವಾಡಿ: ಸಾಮಾಜಿಕ ನ್ಯಾಯದ ಪ್ರಕಾರ ಮೀಸಲಾತಿ ಸಮಾನವಾಗಿ ಹಂಚಿಕೆಯಾಗಬೇಕು ಎಂದು ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಘಟಕದ ಅಧ್ಯಕ್ಷ ಆರ್. ಮೋಹನರಾಜ ಹೇಳಿದರು. ಪಟ್ಟಣದಲ್ಲಿ ಬಸವ ಜನ್ಮಸ್ಮಾರಕ ಹಾಗೂ ಮೂಲನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದರು.

‘ಮೀಸಲಾತಿ ಹೆಸರಿನಲ್ಲಿ ಅನೇಕ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂದು ಹೋರಾಟ ನಡೆಸುತ್ತಿರುವುದು ನ್ಯಾಯ ಸಮ್ಮುತವಾಗಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದರು.

‘ರಾಜ್ಯದ ಲೋಕಸಭಾ ಸದಸ್ಯರು ರಾಜ್ಯದ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರ ಸ್ವಾರ್ಥಕ್ಕಾಗಿ ರಾಜ್ಯದ ರೈತರು ಮತ್ತು ಜನರನ್ನು ಬಲಿಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು.

ADVERTISEMENT

ಕಾಂಗ್ರೆಸ್‌, ಬಿ.ಜೆ.ಪಿ. ಜೆ.ಡಿ.ಎಸ್ ಹೊರತು ಪಡಿಸಿ ರಾಜ್ಯದಲ್ಲಿ ದಲಿತರು, ಹಿಂದುಳಿದವರು, ಶೋಷಿತರ ಧ್ವನಿಯಾಗಿರುವ ದೇಶದ ಅನೇಕ ಪ್ರಜ್ಞಾವಂತರು, ಬುದ್ಧಿ ಜೀವಿಗಳು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ಮುಖಂಡರು ಸೇರಿಕೊಂಡು ರಾಜ್ಯದಲ್ಲಿ ಒಂದು ಹೊಸ ಪಕ್ಷವನ್ನು ಸ್ಥಾಪಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದೇವೆ ಎಂದು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ದಲಿತರು, ಹಿಂದುಳಿದವರು, ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಕೇಂದ್ರ ಸರ್ಕಾರ ಖಾಸಗಿ ಸಂಸ್ಥೆಗಳಿಗೆ ಬೆಂಬಲ ನೀಡುತ್ತಿರುವುದರಿಂದ ಸರ್ಕಾರದ ಅಡಿಯಲ್ಲಿನ ಅನೇಕ ಸಂಸ್ಥೆಗಳು ಮುಚ್ಚುವ ಹಂತಕ್ಕೆ ತಲುಪಿವೆ ಎಂದು ಹೇಳಿದರು.

ಮಾರ್ಚ್‌ 10 ರಂದು ಬೆಂಗಳೂರಿನಲ್ಲಿ ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ರಾಜ್ಯ ಮಟ್ಟದ ಬೃಹತ್ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ರಮೇಶ ಸಾಲವಾಡಗಿ, ಭೀಮು ದೊಡಮನಿ, ಬಸವರಾಜ ಸಾಲವಾಡಗಿ, ಹನಮಂತ ದೇವಕರ, ರಾಮು ರಬಿನಾಳ, ಶಿವಾನಂದ ಮೂರಮಾನ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.