ADVERTISEMENT

ಈ ರಸ್ತೆಗೆ ‘ದುರಸ್ತಿ ಭಾಗ್ಯ’ ಯಾವಾಗ?

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 7:07 IST
Last Updated 20 ಫೆಬ್ರುವರಿ 2018, 7:07 IST

ದೇವರ ಹಿಪ್ಪರಗಿ: ಪಟ್ಟಣದ ಮೂಲಕ ಹೂವಿನ ಹಿಪ್ಪರಗಿ ಹಾಗೂ ಬಸವನ ಬಾಗೇವಾಡಿಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಸಾತಿಹಾಳ ಗ್ರಾಮದವರೆಗಿನ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ತಗ್ಗು–ದಿನ್ನೆಗಳಿಂದ ಕೂಡಿದ ಈ ರಸ್ತೆಯಲ್ಲಿ ಸಂಚರಿಸುವ ಜನರಿಗೆ ನಿತ್ಯವೂ ಪರದಾಟ ತಪ್ಪದು. ರಸ್ತೆ ಹಾಳಾಗಿ ಹಲವು ತಿಂಗಳೇ ಗತಿಸಿದರೂ ದುರಸ್ತಿ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿಲ್ಲ ಎಂಬುದು ಜನರ ದೂರು.

‘ರಾಯಚೂರು–ಶಿರಾಡೋಣ ರಾಜ್ಯ ಹೆದ್ದಾರಿ 41ರ ಭಾಗವಾಗಿರುವ ಈ ರಸ್ತೆ ಹಾಳಾಗಿರುವ ಕಾರಣ, ಗುತ್ತಿಗೆದಾರರು ಅಲ್ಲಲ್ಲಿ ಡಾಂಬರಿನಿಂದ ತೇಪೆ ಹಾಕಿದ್ದನ್ನು ಬಿಟ್ಟರೆ ಹೆಚ್ಚಿನ ದುರಸ್ತಿ ಕಾರ್ಯವಾಗಿಲ್ಲ’ ಎಂದು ಪಟ್ಟಣದ ಪ್ರಗತಿಪರ ರೈತ ಮಲ್ಲನಗೌಡ ಪಾಟೀಲ ಹಾಗೂ ಪ್ರಮೋದ ನಾಡಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಈ ರಸ್ತೆ ಮೂಲಕ ಸಂಚರಿಸುವ ಬಸ್‌ಗಳಲ್ಲಿ ಯಾರೂ ಹಿಂದಿನ ಸೀಟುಗಳಲ್ಲಿ ಕೂಡುವ ಧೈರ್ಯ ಮಾಡುವುದಿಲ್ಲ. ನಿಂತುಕೊಂಡೇ ಪ್ರಯಾಣಿಸುವುದು ಇಲ್ಲಿ ಸಾಮಾನ್ಯ ದೃಶ್ಯ’ ಎಂದು ಹೇಳುವ ಮೂಲಕ ಹದಗೆಟ್ಟ ರಸ್ತೆಯಿಂದಾಗಿ ಪ್ರಯಾಣ ಎಷ್ಟು ಕಷ್ಟಕರ ಎಂಬುದನ್ನು ವಿವರಿಸಿದರು.

ADVERTISEMENT

‘ಸದರಿ ರಸ್ತೆಯನ್ನು ಶೀಘ್ರವೇ ದುರಸ್ತಿ ಮಾಡುವ ಜೊತೆಗೆ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯಿಂದ ಹೊಸೂರು, ಸರ್ಕಾರಿ ಆಸ್ಪತ್ರೆ ವರೆಗೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.