ADVERTISEMENT

ಬಸವನ ಬಾಗೇವಾಡಿಗೆ ಬೇಕಿದೆ ರಿಂಗ್ ರಸ್ತೆ

ಪ್ರಕಾಶ ಮಸಬಿನಾಳ
Published 15 ಜನವರಿ 2024, 5:02 IST
Last Updated 15 ಜನವರಿ 2024, 5:02 IST
ಬಸವನಬಾಗೇವಾಡಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಬೈಕ್ ಸೇರಿದಂತೆ ವಾಹನಗಳು ನಿಂತುಕೊಂಡಿರುವುದು 
ಬಸವನಬಾಗೇವಾಡಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ಬೈಕ್ ಸೇರಿದಂತೆ ವಾಹನಗಳು ನಿಂತುಕೊಂಡಿರುವುದು    

ಬಸವನ ಬಾಗೇವಾಡಿ: ಐತಿಹಾಸಿಕವಾಗಿ ಮಹತ್ವ ಪಡೆದಿರುವ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಗಮನ ಸೆಳೆಯುತ್ತಿವೆ. ಇಲ್ಲಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನ, ಬಸವಜನ್ಮ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಸಚಿವ ಶಿವಾನಂದ ಪಾಟೀಲರ ಅಭಿವೃದ್ಧಿಪರ ಚಿಂತನೆಯಿಂದಾಗಿ ಭವ್ಯವಾದ ಬಸವ ಭವನ, 133 ಮಳಿಗೆಗಳನ್ಙು ಹೊಂದಿದ ಬೃಹತ್ ಮೆಗಾ ಮಾರುಕಟ್ಟೆ, ನೂತನ ಕಲ್ಯಾಣ ಮಂಟಪ ಹಾಗೂ ನೂತನ ಪುರಸಭೆ ಕಟ್ಟಡ ಮಾದರಿಯಾಗಿವೆ.

ಪಟ್ಟಣದ ಮಾರ್ಗವಾಗಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ದ್ವಿಪಥ ರಸ್ತೆಗಳಿವೆ. ಸಂಜೆಯಾಗುತ್ತಿದ್ದಂತೆ ದ್ವಿಪಥ ರಸ್ತೆಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಪಟ್ಟಣದ  ಬೀದಿ ಕಂಗೊಳಿಸುತ್ತಿದೆ.

ADVERTISEMENT

ದಿನದಿಂದ ದಿನಕ್ಕೆ ತನ್ನ ಮೆರಗನ್ನು ಹೆಚ್ಚಿಸಿಕೊಳ್ಳುತ್ತಿರುವ ಪಟ್ಟಣದಲ್ಲಿ ವಾಹನಗಳ ಸಂಚಾರದ ಸಂಖ್ಯೆಯೂ ಹೆಚ್ಚುತ್ತಿದೆ. ಕಚೇರಿ ಕೆಲಸ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಪರಸ್ಥಳದಿಂದ ಪಟ್ಟಣಕ್ಕೆ ತಮ್ಮ ವಾಹನ ತೆಗೆದುಕೊಂಡು ಜನರು ಬರುತ್ತಾರೆ. ಆದರೆ, ವಾಹನಗಳ ನಿಲುಗಡೆಗೆ ನಿರ್ದಿಷ್ಟ ಸ್ಥಳ ಇಲ್ಲದೇ ಇರುವುದರಿಂದ ರಸ್ತೆ ಬದಿಯಲ್ಲಿಯೇ ನಿಲ್ಲಿಸುವ ಅನಿರ್ವಾಯತೆ ಇದೆ. ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಜಾಗೆ ಇಲ್ಲ ಎಂಬ ಕೊರಗು ವಾಹನ ಸವಾರರಿಗೆ ಕಾಡುತ್ತಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಯ ಅಗತ್ಯತೆ ಇದೆ ಎಂಬುದು ಬೈಕ್ ಸವಾರರು ಸೇರಿದಂತೆ ವಾಹನಗಳ ಚಾಲಕರು ಹೇಳುತ್ತಾರೆ.

ಪಟ್ಟಣದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ತೆಲಗಿ ರಸ್ತೆ, ಬಸ್ ನಿಲ್ದಾಣದ ಮಾರ್ಗ ಬಸವೇಶ್ವರ ದೇವಸ್ಥಾನದ ಮುಂಭಾಗ, ವಿಜಯಪುರ ರಸ್ತೆಯಲ್ಲಿನ ದ್ವಿಪಥ ರಸ್ತೆಯಲ್ಲಿ ಎರಡು ಬದಿಯಲ್ಲಿ ಬೈಕ್ ಸೇರಿದಂತೆ ಇತರೇ ವಾಹನಗಳು ನಿಲುಗಡೆಯಾಗುತ್ತಿವೆ.

ದ್ವಿಪಥ ರಸ್ತೆಯ ಬದಿಯಲ್ಲಿ ಬೈಕುಗಳು ಪಾರ್ಕಿಂಗ್ ಮಾಡಿದಾಗ ಕಾರು, ಜೀಪುಗಳು ನಿಲುಗಡೆಗೆ ಸ್ಥಳಾವಕಾಶ ಲಭ್ಯವಾಗುವುದಿಲ್ಲ. ಹೀಗಾಗಿ ಬೈಕ್‌ಗೆ  ಹೊಂದಿಕೊಂಡೇ ಕೆಲವರು ತಮ್ಮ ಕಾರು, ಜೀಪ್ ನಿಲ್ಲಿಸಿ ಮಾರುಕಟ್ಟೆಯಲ್ಲಿ ತಮ್ಮ ಕೆಲಸಕ್ಕೆ ತೆರಳುವ ಅನಿವಾರ್ಯತೆಯೂ ಕಂಡು ಬರುತ್ತಿದೆ.

ರಾಣಿ ಚನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ತಿರುವು ರಸ್ತೆ ಬದಿಯಲ್ಲಿ ಗೂಡ್ಸ್, ಟಂಟಂ ಸೇರಿದಂತೆ ಇತರೆ ವಾಹನಗಳು ನಿಲುಗಡೆಯಾಗುತ್ತಿರುವುದರಿಂದ ಭಾರಿ ವಾಹನಗಳ ಸಂಚಾರಕ್ಕೆ ಆಗಾಗ್ಗೆ ಅಡೆತಡೆ ಉಂಟಾಗುತ್ತಿದೆ.

ವಿವಿಧ ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ಜನರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವುದು ಒಂದೆಡೆಯಾದರೆ, ಕೊಲ್ಹಾರ ತಾಲ್ಲೂಕಿನ ಕೂಡಗಿಯ ಎನ್.ಟಿ.ಪಿ.ಸಿಗೆ ಹೋಗಿ ಬರುವ ಭಾರಿ ವಾಹನಗಳು, ರಾಯಚೂರು, ಯಾದಗಿರಿ, ದೇವರಹಿಪ್ಪರಗಿ ಮಾರ್ಗದಿಂದ ಪಟ್ಟಣದ ಮಾರ್ಗವಾಗಿ ತೆರಳುವ ವಾಹನಗಳು ಸೇರಿದಂತೆ ಇತರೆ ವಾಹನಗಳ ಸಂಚಾರ ದಿನೇದಿನೇ ಹೆಚ್ಚುತ್ತಿದೆ. ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿರುವುದರಿಂದ ಪಟ್ಟಣದ ಬಸವೇಶ್ವರ ವೃತ್ತದ ಸಮೀಪ ವಾಹನಗಳ ಅಪಘಾತದಿಂದ ಬಿಡಾಡಿ ದನಗಳು ಗಾಯಗೊಂಡು ನರಳುತ್ತಿರುವ ದೃಶ್ಯ ಆಗಾಗ್ಗೆ ಕಂಡುಬರುತ್ತದೆ. ಇತ್ತೀಚೆಗೆ ವಿಜಯಪುರ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಕ್ಕೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಡಿವೈಡರ್‌ನ ಒಂದು ಬದಿಯ ವಿದ್ಯುತ್ ಕಂಬ ನೆಲಕ್ಕುರುಳಿದೆ.

ಕಳೆದ ವಾರ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಟ್ರ್ಯಾಕ್ಟರ್‌ ಟೇಲರ್ ರಸ್ತೆ ಮಧ್ಯದಲ್ಲಿನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಾದಚಾರಿ ರಸ್ತೆಗೆ ನುಗ್ಗಿದ್ದರಿಂದ ಅಲಂಕಾರಿಕ ವಿದ್ಯುತ್ ಕಂಬ ಹಾಗೂ ಪಾದಚಾರಿ ರಸ್ತೆಯಲ್ಲಿಟ್ಟಿದ್ದ ವಿವಿಧ ವ್ಯಾಪಾರಸ್ಥರ ತಳ್ಳು ಗಾಡಿಯಲ್ಲಿ ಇಟ್ಟಿದ್ದ ಹಣ್ಣು-ಹಂಪಲು, ವಿಭೂತಿ ಸೇರಿದಂತೆ ವಿವಿಧ ಸಾಮಗ್ರಿಗಳು ಹಾನಿಯಾದ ಘಟನೆ ನಡೆದಿದೆ. ರಾತ್ರಿ ವಾಹನ ಸಂಚಾರ ಹಾಗೂ ಜನದಟ್ಟಣೆ ಅಷ್ಟಾಗಿ ಇಲ್ಲದೇ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಪಟ್ಟಣದಲ್ಲಿ ದಿನೇ ದಿನೇ ವಾಹನ ಸಂಚಾರ ಹಾಗೂ ನಿಲುಗಡೆ ಹೆಚ್ಚುತ್ತಿದೆ. ಭಾರಿ ವಾಹನಗಳು ಪಟ್ಟಣದ ಐತಿಹಾಸಿಕ ದೇವಸ್ಥಾನದ ಮುಂಭಾಗದಲ್ಲೇ ಸಂಚರಿಸುತ್ತಿವೆ. ವಾಹನಗಳ ದಟ್ಟಣೆ ತಡೆಯುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಸೂಕ್ತ ಸಂಚಾರ ವ್ಯವಸ್ಥೆಯಾಗಬೇಕಿದೆ. ಅಲ್ಲದೇ, ಪಟ್ಟಣದ ಮಾರ್ಗವಾಗಿ ಸಂಚರಿಸುವ ಭಾರಿ ವಾಹನಗಳು ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ಪಟ್ಟಣದ ಹೊರ ವಲಯದಲ್ಲಿ ರಿಂಗ್ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎಂದು ಪಟ್ಟಣದ ನಿವಾಸಿಗಳ ಅಭಿಪ್ರಾಯ.

ಪಟ್ಟಣದ ವಿಜಯಪುರ ರಸ್ತೆಯಲ್ಲಿ ದ್ವಿಪಥ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ತಳಪಾಯಕ್ಕೆ ಸಿಮೆಂಟ್ ಕಟ್ಟೆ ಡಿವೈಡರ್‌ನಿಂದ ಹೊರ ಚಾಚಿದ್ದರಿಂದ ಡಿವೈಡರ್‌ಗೆ ಹೊಂದಿಕೊಂಡು ಹೋಗುವ ವಾಹನ ಸವಾರರು ಭಯದಲ್ಲೇ ಹೋಗುವ ಪರಿಸ್ಥಿತಿ ಇದೆ. ವಾಹನ ಸವಾರರು ಜಾಗೃತಿ ವಹಿಸದೇ ಇದ್ದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬುದಕ್ಕೆ ಡಿವೈಡರ್‌ನ ವಿದ್ಯುತ್ ಕಂಬಕ್ಕೆ ವಾಹನಗಳು ಡಿಕ್ಕಿ ಹೊಡೆದ ಉದಾಹರಣೆಗಳಿವೆ ಎನ್ನುತ್ತಾರೆ ಪಟ್ಟಣದ ಕೆಲ ನಿವಾಸಿಗಳು.

ಪಟ್ಟಣದಲ್ಲಿ ಭಾರೀ ವಾಹನಗಳ ಸಂಚಾರವು ಜನರಲ್ಲಿ ಭಯಕ್ಕೆ ಕಾರಣವಾಗಿದೆ. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಿಂಗ್‌ ರೋಡ್‌  ಅಗತ್ಯವಿದೆ. ಇದರಿಂದ  ಪಟ್ಟಣದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಅಶೋಕ ಹಾರಿವಾಳ, ಅಧ್ಯಕ್ಷ, ಜಿಲ್ಲಾ ಯುವ ಘಟಕ ಕರ್ನಾಟಕ ರಕ್ಷಣಾ ವೇದಿಕೆ
ಪಟ್ಟಣದ ವಿಜಯಪುರ ರಸ್ತೆಯ ಮಧ್ಯದಲ್ಲಿನ ಡಿವೈಡರ್‌ಗಳಿಗೆ ಅಳವಡಿಸಿದ ವಿದ್ಯುತ್ ಕಂಬಗಳ ತಳಪಾಯ ಅವೈಜ್ಞಾನಿಕವಾಗಿ ಅಳವಡಿಸಿದ್ದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು ಇದನ್ನು ಸರಿಪಡಿಸುವ ಅಗತ್ಯತೆ ಇದೆ.
ಡಾ.ಮಹಾಂತೇಶ, ಜಾಲಗೇರಿ
ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ಸಾರ್ವಜನಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬಾರದು. ಪಟ್ಟಣದ ಮೆಗಾ ಮಾರುಕಟ್ಟೆ ಕೆಳಭಾಗದಲ್ಲಿ ವಾಹನಗಳ ಪಾರ್ಕಿಂಗ್ ಗೆ ಸ್ಥಳವಕಾಶವಿದೆ. ಶೀಘ್ರದಲ್ಲೇ ಅಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.
ಎಚ್.ಎಚ್.ಚಿತ್ತರಗಿ, ಮುಖ್ಯಾಧಿಕಾರಿ ಪುರಸಭೆ
ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿನ ರಸ್ತೆಯ ಡಿವೈಡರ್ ವಿದ್ಯುತ್ ಕಂಬಕ್ಕೆ  ರಾತ್ರಿ ಡಿಕ್ಕಿ ಹೊಡೆದ ಟೇಲರ್ ವಾಹನ 
ಬಸವನಬಾಗೇವಾಡಿಯ ವಿಜಯಪುರ ರಸ್ತೆಯ ಮಧ್ಯದ ಡಿವೈಡರ್ ಮಧ್ಯೆ ಹೊರ ಚಾಚಿರುವ ವಿದ್ಯುತ್ ಕಂಬದ ತಳಪಾಯ  ಕಟ್ಟೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.