ADVERTISEMENT

ವಿದ್ಯಾರ್ಥಿಗಳಿಗೆ ಪೊಲೀಸ್ ಕೆಡೆಟ್ ತರಬೇತಿ

ಹುಣಶ್ಯಾಳ ಪಿ.ಬಿ. ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿನೂತನ ಪ್ರಯೋಗ

ಪ್ರಕಾಶ ಮಸಬಿನಾಳ
Published 22 ಏಪ್ರಿಲ್ 2021, 10:35 IST
Last Updated 22 ಏಪ್ರಿಲ್ 2021, 10:35 IST
ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪೊಲೀಸ್ ಕೇಡೆಟ್ ತರಬೇತಿ ಪಡೆಯುತ್ತಿರುವುದು
ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಪೊಲೀಸ್ ಕೇಡೆಟ್ ತರಬೇತಿ ಪಡೆಯುತ್ತಿರುವುದು   

ಬಸವನಬಾಗೇವಾಡಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಿಸುವುದು, ನಿಯಮಗಳ ಪಾಲನೆ ಸೇರಿದಂತೆ ಧೈರ್ಯ, ಸಾಹಸ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪೊಲೀಸ್ ಕೆಡೆಟ್ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ನೀಡಲಾಗುತ್ತಿದೆ.

2019-20ನೇ ಸಾಲಿನಲ್ಲಿ ಆರಂಭವಾದ ತರಬೇತಿಗೆ 8ನೇ ತರಗತಿಯ 22 ವಿದ್ಯಾರ್ಥಿಗಳು, 22 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿತ್ತು.

2020-21ನೇ ಸಾಲಿನಲ್ಲಿ 8ನೇ ತರಗತಿಯ 44, ಹಾಗೂ 9ನೇ ತರಗತಿಯ 44 ಸೇರಿ ಒಟ್ಟು 88 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ಕೋವಿಡ್-19 ಹಿನ್ನೆಲೆಯಲ್ಲಿ ತರಬೇತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ADVERTISEMENT

ವಿಜಯಪುರದ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಮಹಾಂತೇಶ ವಿ.ಪಾಟೀಲ ಅವರು ಪ್ರತಿ ಶನಿವಾರ ಶಾಲೆಯ ಆವರಣದಲ್ಲಿ, ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕವಾಯತ್ (ಪರೇಡ್‌) ಸೇರಿದಂತೆ ವಿವಿಧ ಆಟಗಳನ್ನು ಆಡಿಸುವ ಮೂಲಕ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಶಿಸ್ತು, ಸಮಯ ಪಾಲನೆ, ಮಹಿಳಾ, ಮಕ್ಕಳ ಸುರಕ್ಷತೆ, ರಸ್ತೆ ನಿಯಮ ಪಾಲನೆ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತಿದೆ.

ತರಬೇತಿ ಜೊತೆಗೆ ಮೌಲ್ಯಗಳು, ನೀತಿ ಮತ್ತು ತತ್ವಗಳ ಪಾಲನೆ, ವಾರದ ಸುದ್ಧಿ ಸಮಾಚಾರಗಳ ಬಗ್ಗೆ ವಿಶ್ಲೇಷಣೆ, ಪ್ರಕೃತಿ ವಿಕೋಪ, ಪ್ರಾಕೃತಿಕ ವಿಕೋಪಗಳ ನಿರ್ವಹಣೆ, ಶಾಲೆಗಳ ಸುರಕ್ಷತೆ, ಭ್ರಷ್ಟಾಚಾರ, ಅದರ ವಿರುದ್ದ ಹೋರಾಟದ ಬಗ್ಗೆ, ಮಾಹಿತಿ ಹಕ್ಕು ಕಾಯಿದೆ-2005 ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ.

ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ, ತುರ್ತು ಕೇಂದ್ರಗಳು ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವಿಧಾನದ ಬಗ್ಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ.

ವರ್ಷವೀಡಿ (ಪ್ರತಿ ಶನಿವಾರಕ್ಕೊಮ್ಮೆ) ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.

ತರಬೇತಿ ಮುಕ್ತಾಯ ಸಮಾರಂಭದಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ತರಬೇತಿಯ ಎಸಿಪಿಒ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಸಿ.ಎಂ.ವಾಡೇಕರ, ಸಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಎಸ್.ಜಿ.ವಿಧಾತೆ ಮಾಹಿತಿ ನೀಡಿದರು.

ಶಾಲೆಯಲ್ಲಿ ನಡೆಯುವ ಪಠ್ಯ, ಪಠ್ಯೇತರ ಚಟುವಟಿಕೆಗಳೊಂದಿಗೆ ಸ್ಟುಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ) ಹೊಸ ಅನುಭವ ನೀಡಿದೆ. ನಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸುವುದರೊಂದಿಗೆ ದೈಹಿಕ, ಮಾನಸಿಕ ಸದೃಢತೆ ಹೊಂದಿ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ತರಬೇತಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಿಳಿಸಿದರು.

ಸ್ಟುಡೆಂಡ್ ಪೊಲೀಸ್ ಕೆಡೆಟ್‌ನ ತರಬೇತಿಯ ಪ್ರಯೋಜನವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ತರಬೇತಿಗಾಗಿ ಬಂದ ಅನುದಾನದಲ್ಲಿ ಪ್ರತಿ ಶನಿವಾರ ನಡೆಯುವ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ ನೀಡಲಾಗುತ್ತಿದೆ. ಅಲ್ಲದೇ, ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಲೇಖನ ಸಾಮಗ್ರಿ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ವಿನಯೋಗಿಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ಎಸ್.ಟಿ.ಹರಿಜನ ತಿಳಿಸಿದರು.


***

ವಿದ್ಯಾರ್ಥಿಗಳಲ್ಲಿ ಧೈರ್ಯ ಸಾಹಸ ಪ್ರವೃತ್ತಿ ಬೆಳೆಸುವುದರೊಂದಿಗೆ ವಿವಿಧ ವಿಷಯಗಳನ್ನು ತಿಳಿಸಿಕೊಡುವ ಮೂಲಕ ಭವಿಷ್ಯತ್ತಿನಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಲು ತರಬೇತಿ ಪೂರಕವಾಗಿದೆ. ಇಂತಹ ತರಬೇತಿಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿದಂತಾಗುತ್ತದೆ
–ಪರಶುರಾಮ ಅಡಗಿಮನಿ,
ಅಧ್ಯಕ್ಷರು, ಎಸ್.ಡಿ.ಎಂ.ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.